  : ʻಉದ್ದೇಶ ಅದಾಗಿರ್ಲಿಲ್ಲʼ- ʻಪಾಕಿಸ್ತಾನʼ ಹೇಳಿಕೆಗೆ ಹೈಕೋರ್ಟ್ ನ್ಯಾಯಮೂರ್ತಿ ವಿಷಾದ
ನವದೆಹಲಿ: ಬೆಂಗಳೂರಿನ ಮುಸ್ಲಿಂ ಪ್ರಾಬಲ್ಯ ಏರಿಯಾ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಕರೆದು ವಿವಾದಾಕ್ಕೀಡಾಗಿರುವ  ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ(  ) ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಶನಿವಾರ ವಕೀಲರ ಸಂಘದ ಪ್ರತಿನಿಧಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಶ್ರೀಶಾನಂದ, ತಮ್ಮ ಹೇಳಿಕೆಗೆ ವಿಷಾಧ ವ್ಯಕ್ತಪಡಿದ್ದಾರೆ. ತಾವು ಯಾವುದೇ ಸಮುದಾಯವನ್ನು ಗುರಿಯಾಗಿಸಿ ಹೇಳಿಕೆ ನೀಡಿಲ್ಲ ಎಂದಿರುವ ಶ್ರೀಶಾನಂದ,  ಮುಂದೆ ಇಂತಹ ಟೀಕೆಗಳನ್ನು ಮಾಡುವುದನ್ನು ತಪ್ಪಿಸುವುದಾಗಿ ಭರವಸೆ ನೀಡಿದರು. ಲೈವ್-ಸ್ಟ್ರೀಮ್ ಮಾಡಿದ ನ್ಯಾಯಾಲಯದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಬಗ್ಗೆ  ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ನಂತರ ಅವರು ಸ್ಪಷ್ಟನೆ ನೀಡಿದ್ದಾರೆ.
                      .../MPEP6x8Jov
ಏನಿದು ವಿವಾದ?
ಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಮುಸ್ಲಿಂ ಧರ್ಮದ ಜನರು ಹೆಚ್ಚಾಗಿ ವಾಸಿಸುವ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಕರೆಯುವ ಮೂಲಕ ನ್ಯಾ. ಶ್ರೀಶಾನಂದ ಅವರು ವಿವಾದವನ್ನು ಹುಟ್ಟುಹಾಕಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವಿಚಾರಣೆ ವೇಳೆ ನ್ಯಾಯಾಧೀಶರು, ಮೈಸೂರು ರಸ್ತೆಯ ಮೇಲ್ಸೇತುವೆಗೆ ಹೋಗಿ, ಪ್ರತಿ ಆಟೋ ರಿಕ್ಷಾದಲ್ಲಿ 10 ಜನರು ಇರುತ್ತಾರೆ. ಇದು ಅನ್ವಯಿಸುವುದಿಲ್ಲ. ಏಕೆಂದರೆ ಗೋರಿ ಪಾಳ್ಯದಿಂದ ಮಾರುಕಟ್ಟೆಯವರೆಗಿನ ಮೈಸೂರು ರಸ್ತೆಯ ಮೇಲ್ಸೇತುವೆ ಪಾಕಿಸ್ತಾನದಲ್ಲಿದೆ, ಭಾರತದಲ್ಲಿಲ್ಲ. ಇದು ವಾಸ್ತವ. ನೀವು ಎಷ್ಟೇ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯನ್ನು ಇರಿಸಿದರೂ ಅಷ್ಟೇ…ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ‘ಸಂಜೆ 250 ಕೊಡು, ಇಲ್ಲಾಂದ್ರೆ ಶೆಡ್ಡಿಗ್ ಬಾ’ ಎಂದಿರುವುದು ಕೂಡ ವೈರಲ್ ಆಗಿತ್ತು. ಮಹಿಳಾ ವಕೀಲೆಯೊಬ್ಬರಿಗೆ, ಪ್ರತಿವಾದಿ ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂಬುದನ್ನು ಹೇಳುವಷ್ಟರ ಮಟ್ಟಿಗೆ ಅವರ ಬಗ್ಗೆ ನೀವು ತಿಳಿದುಕೊಂಡಿದ್ದೀರಿ ಎಂದು ವ್ಯಂಗ್ಯವಾಡಿದ್ದರು ಎನ್ನಲಾಗಿತ್ತು. ನ್ಯಾಯಾಧೀಶರು ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ​ ವೈರಲ್​ ಆಗುತ್ತಿದ್ದು ಅನೇಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶವನ್ನು ಪಾಕಿಸ್ತಾನವೆಂದು ಪ್ರಸ್ತಾಪಿಸಿ ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ ವಿವಾದದ ಸೃಷ್ಟಿಸಿದ್ದರು. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಇದೀಗ ಇದು ಸುಪ್ರೀಂಕೋರ್ಟ್‌ ಗಮನ ಸೆಳೆದಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎಸ್‌.ಖನ್ನಾ, ಬಿ.ಆರ್‌. ಗವಾಯ್‌, ಎಸ್‌ ಕಾಂತ್‌ ಮತ್ತು ಹೆಚ್‌.ರಾಯ್‌ ಇದ್ದ ಪಂಚ ಸದಸ್ಯ ಪೀಠ, ನ್ಯಾ.ವೇದವ್ಯಾಸಾಚಾರ್‌ ಶ್ರೀಶಾನಂದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ವರದಿ ನೀಡುವಂತೆ ತಾಕೀತು ಮಾಡಿತ್ತು.
ನ್ಯಾಯಾಲಯದ ಕಲಾಪಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಸಾಮಾಜಿಕ ಜಾಲತಾಣಗಳು ಸಕ್ರಿಯ ಪಾತ್ರವನ್ನು ವಹಿಸಿದಾಗ ಇಂತಹ ಘಟನೆಗಳು ಬೆಳಕಿಗೆ ಬರುತ್ತದೆ ಎಂದ ಕೋರ್ಟ್‌, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಮಾಡಿದ ಕೆಲವು ಕಾಮೆಂಟ್‌ಗಳ ಬಗ್ಗೆ ನಮ್ಮ ಗಮನ ಸೆಳೆದಿದೆ. ನಮಗೆ ಸಹಾಯ ಮಾಡಲು ಎಜಿ ಮತ್ತು ಎಸ್‌ಜಿಯನ್ನು ಕೇಳಿದ್ದೇವೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಂದ ಆಡಳಿತಾತ್ಮಕ ನಿರ್ದೇಶನಗಳನ್ನು ಕೋರಿ ಈ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುವಂತೆ ನಾವು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚನೆ ನೀಡಿದ್ದೇವೆ. 2 ವಾರಗಳೊಳಗಾಗಿ ಈ ವರದಿ ಸಲ್ಲಿಸುವಂತೆ ಹೇಳಲಾಗಿದೆ ಎಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ:  : ಮುಸ್ಲಿಂ ಪ್ರಾಬಲ್ಯ ಏರಿಯಾವನ್ನು ಪಾಕಿಸ್ತಾನ ಎಂದ ಕರ್ನಾಟಕ ಹೈಕೋರ್ಟ್‌ ಜಡ್ಜ್‌- ಸುಪ್ರೀಂಕೋರ್ಟ್‌ ಗರಂ