ಹೊಸ ವರ್ಷಾಚರಣೆಗೆ ಹೋದವ ಶವವಾಗಿ ಪತ್ತೆ
ಕುಲು:ಹಿಮಾಚಲ ಪ್ರದೇಶದ ಕುಲುವಿನಲ್ಲಿ ಹೊಸ ವರ್ಷಾಚರಣೆ ಮಾಡಲು ಹೋದ ಟೆಕ್ಕಿಯೋರ್ವನ ಶವ ನಾಪತ್ತೆಯಾದ ಬರೋಬರಿ ತಿಂಗಳ ಬಳಿಕ ನದಿಯೊಂದರ ಬಳಿ ಪತ್ತೆಯಾಗಿದೆ.
ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ, ಗಾಜಿಯಾಬಾದ್‌ ನಿವಾಸಿ ಟೆಕ್ಕಿ ಅಭಿನವ್ ಮಿಂಗ್ವಾಲ್ ಹಾಗೂ ಆತನ ಸ್ನೇಹಿತರು ಕಳೆದ ವರ್ಷ ಡಿಸೆಂಬರ್ 15 ರಂದು ಹಿಮಾಚಲ ಪ್ರದೇಶದ ಕುಲುವಿಗೆ ಪ್ರವಾಸ ತೆರಳಿದ್ದರು. ಆತನ ಸ್ನೇಹಿತರು ಬಸ್ ಮೂಲಕ ವಾಪಸ್ ಗಾಜಿಯಾಬಾದ್‌ಗೆ ಮರಳಿದ್ದರು. ಆದರೆ ಅಭಿನವ್ ಹೊಸ ವರ್ಷದ ಪಾರ್ಟಿ ಮುಗಿಸಿ ಬರುವುದಾಗಿ ಹೇಳಿ ಅಲ್ಲೇ ಉಳಿದಿದ್ದ. ನಂತರ ಡಿ. 31 ರಂದು ತನ್ನ ಕುಟುಂಬದ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದು, ಜ.1 ರಂದು ರಿಟರ್ನ್ ಟಿಕೆಟ್ ಬುಕ್ ಮಾಡಿದ್ದು, ಜನವರಿ 2 ರಂದು ಮನೆಗೆ ಬರುವುದಾಗಿ ಹೇಳಿದ್ದ. ಆದರೆ ಮಗ ಮನೆಗೆ ಬಾರದ ಹಿನ್ನೆಲೆ ಯಲ್ಲಿ ಪೋಷಕರು ಗಾಬರಿಗೊಂಡಿದ್ದರು.
ಆತ ನಾಪತ್ತೆಯಾಗಿ 35 ದಿನಗಳ ನಂತರ ಕುಲು ಸಮೀಪದ ಪಾರ್ವತಿ ನದಿಯಲ್ಲಿ ಬಂಡೆಗಳ ಮಧ್ಯೆ ಯುವಕನೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ ಹೊಸ ವರ್ಷದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ಥಳ ದಿಂದ ಸುಮಾರು 800 ಮೀಟರ್ ದೂರದಲ್ಲಿ ಈತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
