ಆರೋಪಿಗಳ ಹುಡುಕಾಟದ ವೇಳೆ ಪೊಲೀಸರ ದಾಳಿಯಲ್ಲಿ ಶಿಶು ಸಾವು
ರಾಂಚಿ: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಆರೋಪಿಗಳ ಹುಡುಕಾಟದ ವೇಳೆ ಪೊಲೀಸರು ನಡೆಸಿದ ದಾಳಿಯಲ್ಲಿ ನಾಲ್ಕು ದಿನದ ಶಿಶು ಮೃತಪಟ್ಟಿರುವ ಘಟನೆ ನಡೆದಿದೆ.
ಈ ಪ್ರಕರಣ ಸಂಬಂಧ ಆರು ಮಂದಿ ಪೋಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಐವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ನ್ಯಾಯಾಲಯ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನಾಲ್ಕು ದಿನದ ಶಿಶುವು ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದೆ ಎಂದು ಉಲ್ಲೇಖಿಸ ಲಾಗಿದೆ.
‘ಗಿರಿದಿಹ್‌ನ ಡಿಯೋರಿ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳಾದ ಸಂಗಮ್ ಪಾಠಕ್ ಮತ್ತು ಎಸ್‌.ಕೆ ಮಂಡಲ್ ಸೇರಿದಂತೆ ಆರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇವರಲ್ಲಿ ಐವರನ್ನು ಅಮಾನತುಗೊಳಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಬಾಬುಲಾಲ್ ಮರಾಂಡಿ ಅವರು ‘ಹೇಯ’ ಕೃತ್ಯ ಎಂದು ಕರೆದಿದ್ದು, ಈ ಸಂಬಂಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.