ಲೈಂಗಿಕ ಹಗರಣ: ಎನ್​ಬಿಸಿ ಯೂನಿವರ್ಸಲ್ ಸಿಇಒ ತಲೆದಂಡ
ನವದೆಹಲಿ:ಜಾಗತಿಕ ಮಾಧ್ಯಮ ದೈತ್ಯ ಸಂಸ್ಥೆ ಎನಿಸಿದ ಅಮೆರಿಕದ ಎನ್​ಬಿಸಿ ಯೂನಿವರ್ಸಲ್​ನಲ್ಲಿ ಎದ್ದಿದ್ದ ಲೈಂಗಿಕ ಹಗರಣ ಇದೀಗ ಸಿಇಒ ತಲೆದಂಡದ ಹಂತಕ್ಕೆ ಮುಟ್ಟಿದೆ. ಮಹಿಳಾ ಉದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಆರೋಪಎದುರಾದ ಹಿನ್ನೆಲೆಯಲ್ಲಿ ಎನ್​ಬಿಸಿ ಯೂನಿವರ್ಸಲ್ ಕಂಪನಿಯ ಸಿಇಒ ಜೆಫ್ ಶೆಲ್ ಹೊರನಡೆಯುತ್ತಿದ್ದಾರೆ.
ಜೆಫ್ ಶೆಲ್ ಎನ್​ಬಿಸಿ ಯೂನಿವರ್ಸಲ್ ಸಂಸ್ಥೆಯಿಂದಲೇ ನಿರ್ಗಮಿಸುತ್ತಿರುವ ಸಂಗತಿ ಯನ್ನು ಅದರ ಮಾಲಕ ಸಂಸ್ಥೆ ಕಾಮ್​ಕ್ಯಾಸ್ಟ್ () ತಿಳಿಸಿದೆ. ಜೆಫ್ ಶೆಲ್ ಕೂಡ ಈ ಸಂಸ್ಥೆಯಲ್ಲಿ ಇಂದು ತಮ್ಮದು ಕೊನೆಯ ದಿನ ಎಂದು ಹೇಳಿಕೆ ನೀಡಿದ್ದರು.
ಎನ್​ಬಿಸಿ ಯೂನಿವರ್ಸಲ್​ನಲ್ಲಿ ಮಹಿಳೆಯೊಂದಿಗೆ ಜೆಫ್ ಶೆಲ್ ಅವರು ಅನೈತಿಕ ಸಂಬಂಧ ಹೊಂದಿರುವ ಸಂಗತಿ ಬಗ್ಗೆ ತನಿಖೆ ನಡೆದಿದೆ. ಈ ಹಿನ್ನೆಲೆಯಲ್ಲಿ ಶೆಲ್ ಅವರು ಎನ್​ಬಿಸಿ ಯೂನಿವರ್ಸಲ್​ನಿಂದ ಹೊರ ನಡೆಯಬೇಕಾಗಿದೆ ಎಂದು ವರದಿಗಳು ಹೇಳಿವೆ.
‘ಕಾಮ್​ಕ್ಯಾಸ್ಟ್ ಮತ್ತು ಎನ್​ಬಿಸಿ ಯೂನಿವರ್ಸಲ್​ನಲ್ಲಿರುವ ನನ್ನ ಸಹೋದ್ಯೋಗಿಗಳ ವಿಶ್ವಾಸಕ್ಕೆ ಧಕ್ಕೆ ತಂದಿರುವುದಕ್ಕೆ ನಿಜಕ್ಕೂ ನನಗೆ ವಿಷಾದ ಇದೆ. ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಬಹಳ ಪ್ರತಿಭಾನ್ವಿತರು. ಕಳೆದ 19 ವರ್ಷಗಳಿಂದ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ’ ಎಂದು ಜೆಫ್ ಸೆಲ್ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಜೆಫ್ ಶೆಲ್ ಅವರು ಎನ್​ಬಿಸಿ ಯೂನಿವರ್ಸಲ್​ನಲ್ಲಿ 2004ರಿಂದಲೂ ಇದ್ದರು. 2020ರಲ್ಲಿ ಈ ಕಂಪನಿಗೆ ಸಿಇಒ ಆಗಿದ್ದರು. ಎನ್​ಬಿಸಿ ಯೂನಿವರ್ಸಲ್​ನ ವೈವಿಧ್ಯಮಯ ವ್ಯವಹಾರಗಳನ್ನು ಅವರು ಸಿಇಒ ಆಗಿ ನಿಭಾಯಿಸಿದ್ದರು.