ನಕಲಿ ಮದ್ಯ ಪ್ರಕರಣ: ಮೃತರ ಸಂಖ್ಯೆ 18
ವಿಲ್ಲುಪುರಂ:ತಮಿಳುನಾಡಿನ ವಿಲ್ಲುಪುರಂ ಜಿಲ್ಲೆ ಸೇರಿದಂತೆ ವಿವಿಧೆಡೆ ನಕಲಿ ಮದ್ಯ ಸೇವನೆ ಪ್ರಕರಣದಲ್ಲಿ ಮತ್ತಿಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ವಿಲ್ಲುಪುರಂ ಒಂದರಲ್ಲೇ ಮೂವರು ಮಹಿಳೆಯರು ಸೇರಿ 13 ಮಂದಿ ವಿಷಪೂರಿತ ಮದ್ಯಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲೆಯ ಮರಕ್ಕನಂನ ಎಕ್ಕಿಯಾರ್ಕುಪ್ಪಂ ಮೀನುಗಾರಿಕಾ ಪ್ರದೇಶದಲ್ಲಿ ಶನಿವಾರ ಸಂಜೆ ಜನರ ಗುಂಪೊಂದು ಮದ್ಯ ಸೇವಿಸಿತ್ತು. ಕೆಲ ಗಂಟೆಗಳ ಬಳಿಕ ಒಟ್ಟು ಮಂದಿ ಸಾವನ್ನಪ್ಪಿ ದ್ದರು. ಮೃತರನ್ನು ಶಂಕರ್, ಸುರೇಶ್, ಧರಣಿವೇಲ್, ರಾಜಮೂರ್ತಿ, ವಿಜಯನ್, ಮನ್ನಕಟ್ಟಿ, ಮಲರ್ವಿಜ್ಲಿ, ಅಭಿರಾಗಂ, ಕೇಶವ ವೇಲು, ಶಂಕರ್, ವಿಜಯನ್, ರಾಜವೇಲು ಮತ್ತು ಶರತ್ ಕುಮಾರ್ ಎಂದು ಗುರುತಿಸಲಾಗಿದೆ.
ಮತ್ತೊಂದು ಘಟನೆ ಭಾನುವಾರ ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಗಮ್‌ನಿಂದ ವರದಿಯಾಗಿದ್ದು, ಅಕ್ರಮ ಮದ್ಯ ಸೇವನೆಯಿಂದ ಐವರು ಸಾವನ್ನಪ್ಪಿದ್ದರು. ಇದರಲ್ಲಿ ಚಿತ್ತಮೂರಿನ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ ಪ್ರಕರಣ ವರದಿಯಾಗಿತ್ತು.
ಮದ್ಯ ಸೇವಿಸಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮರನ್ ಎಂಬಾತನನ್ನು ಬಂಧಿಸಲಾಗಿದೆ. ಆತನ ಬಳಿಯಿದ್ದ ನಕಲಿ ಮದ್ಯ ವಶಪಡಿಸಿಕೊಳ್ಳಲಾಗಿದೆ.