ರಾ.ಹೆದ್ದಾರಿಯ ಬಳಿ ಬಿಜೆಪಿ ನಾಯಕಿ ಮೃತದೇಹ ಪತ್ತೆ
ಗುವಾಹಟಿ:ಅಸ್ಸೋಂದ ಗೋಲ್ಪಾರಾ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದನಾಯಕಿಯೊಬ್ಬರ ಮೃತದೇಹ ರಾಷ್ಟ್ರೀಯ ಹೆದ್ದಾರಿಯ ಬಳಿ ಪತ್ತೆಯಾಗಿದ್ದು, ಕೊಲೆ ಮಾಡಿ ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಆಡಳಿತಾರೂಢ ಬಿಜೆಪಿ ನಾಯಕಿ ಜೋನಾಲಿ ನಾಥ್ ಕೊಲೆಯಾದವರಾಗಿದ್ದು, ಈ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬಿಜೆಪಿ ಸಕ್ರಿಯ ಕಾರ್ಯಕರ್ತೆ ಯಾಗಿದ್ದ ಜೋನಾಲಿ ನಾಥ್ ಗೋಲ್ಪಾರಾ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿದ್ದರು. ಮಟಿಯಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರ ಮೃತದೇಹವು ಕೃಷ್ಣೈನ ಶಾಲ್ಪಾರಾ ಪ್ರದೇಶದಲ್ಲಿ ಎನ್​ಹೆಚ್​​ 17ರ ಬಳಿ ಪತ್ತೆಯಾಗಿದೆ.
ಕೊಲೆಗೆ ಮುನ್ನ ತೀವ್ರವಾದ ಹಲ್ಲೆಯನ್ನು ಮಾಡಿರುವ ಶಂಕೆ ಇದ್ದು, ದೇಹದ ಮೇಲೆ ಹಲವಾರು ಗಾಯದ ಗುರುತುಗಳನ್ನು ಸಹ ಪತ್ತೆಯಾಗಿವೆ. ಮಟಿಯಾದಲ್ಲಿನ ಹೋಟೆಲ್‌ನಲ್ಲಿ ಜೋನಾಲಿ ನಾಥ್ ಕೊನೆಯದಾಗಿ ರೆಜಾಲ್ ಕರೀಮ್ ಎಂಬುವವರೊಂದಿಗೆ ಕಾಣಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಇದೊಂದು ಪೂರ್ವಯೋಜಿತ ರಾಜಕೀಯ ಕೊಲೆ ಎಂದು ಜೋನಾಲಿ ನಾಥ್ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಪ್ರಾಥಮಿಕ ಮಾಹಿತಿಯಲ್ಲಿ ಜೋನಾಲಿ ಮತ್ತು ರೆಜಾಲ್ ಇಬ್ಬರೂ ಕೆಲ ಹಣಕಾಸಿನ ವ್ಯವಹಾರಗಳನ್ನು ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ರೆಜಾಲ್ ಕರೀಮ್​ನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನೀಡಿದ್ದಾರೆ.