ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ಮಕ್ಕಳು ಸೇರಿ ಐವರ ಸಾವು
ಬೋಲಂಗೀರ್:ಬೋಲಂಗೀರ್ ಜಿಲ್ಲೆಯ ಸಂಬಲ್‌ಪುರ-ಬೋಲಂಗೀರ್ ರಾಷ್ಟ್ರೀಯ ಹೆದ್ದಾರಿ-26ರ ಕ್ರಾಸಿಂಗ್ ಚೌಕದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಮಂಗಳವಾರ ರಾತ್ರಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.
ಮೃತರನ್ನು ಬೋಲಂಗೀರ್​ನ ನಿವಾಸಿ ಆತ್ಮಜ ನಾಯಕ್(25), ದೀಪ್ತಿ ಸಾಯಿ(35) ಆಕೆಯ ಮಗ ಅಂಜಿ ಸಾಯಿ(6), ಇಪ್ಸಿತಾ ಸಾಯಿ(26), ಆಕೆಯ ಮಗಳು ರಿಯಾ ಸಾಯಿ(6) ಎಂದು ಗುರುತಿಸಲಾಗಿದೆ. ಆರತಿ ನಾಯಕ್ ಮತ್ತು ರಸ್ಮಿತಾ ಸಾಯಿ ಎಂಬ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂರು ಕುಟುಂಬಗಳ ಏಳು ಮಂದಿ ಕಾರಿನಲ್ಲಿದ್ದರು. ಎಲ್ಲರೂ ಸಂಬಂಧಿಕರು. ಬೋಲಂಗೀರ್ ಜಿಲ್ಲೆಯ ನಿವಾಸಿ ಗಳಾದ ಇವರು ಅಗಲ್‌ಪುರದ ದುಡುಕಾ ಗ್ರಾಮದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಬೋಲಂಗೀರ್‌ ಗೆ ವಾಪಸ್​ ಆಗುತ್ತಿದ್ದಾಗ ದುರ್ಘಟನೆ ನಡೆದಿದೆ. ಅಪಘಾತ ಎಷ್ಟು ತೀವ್ರ ವಾಗಿತ್ತು ಎಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯರ ನೆರವಿನಿಂದ ಸಂತ್ರಸ್ತರನ್ನು ಭೀಮಾ ಭೋಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿನ ವೈದ್ಯರು 5 ಜನರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮಾಹಿತಿ ಪಡೆದ ಬೋಲಂಗೀರ್ ಪಟ್ಟಣ ಪೊಲೀಸರು ಮತ್ತು ಎಸ್‌ಡಿಪಿಒ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.