ಮಣಿಪುರ: ಶಾಲೆ ಹೊರಗೆ ದುಷ್ಕರ್ಮಿಗಳಿಂದ ಮಹಿಳೆಯ ಹತ್ಯೆ
ಮಣಿಪುರ:ಜನಾಂಗೀಯ ಘರ್ಷಣೆಗಳ ಮಧ್ಯೆ ಇಂಫಾಲ್ ಪಶ್ಚಿಮ ಜಿಲ್ಲೆಯ ಶಾಲೆ ಯೊಂದರ ಹೊರಗೆ ಅಪರಿಚಿತ ದುಷ್ಕರ್ಮಿ ಗಳು ಮಹಿಳೆಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಶಾಲೆಗಳು ಪುನರಾರಂಭಗೊಂಡ ಕೇವಲ ಒಂದು ದಿನದ ನಂತರ ಈ ಘಟನೆಯು ಪ್ರದೇಶದಲ್ಲಿ ಭೀತಿ ಉಂಟುಮಾಡಿದೆ.
ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಶಿಶು ನಿಷ್ಠ ನಿಕೇತನ ಶಾಲೆಯ ಹೊರಗೆ ಈ ಘಟನೆ ನಡೆದಿದೆ.
ಹಿಂಸಾಚಾರದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಪೊಲೀಸ್ ಶಸ್ತ್ರಾಗಾರದಿಂದ ಬಂದೂಕುಗಳನ್ನು ಲೂಟಿ ಮಾಡಲು ಗಲಭೆಕೋರರ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ಭಾರತೀಯ ರಿಸರ್ವ್ ಬೆಟಾಲಿಯನ್ ಸಿಬ್ಬಂದಿಯ ಮನೆಗೆ ಜನಸಮೂಹವು ತೌಬಲ್ ಜಿಲ್ಲೆಯಲ್ಲಿ ಬೆಂಕಿ ಹಚ್ಚಿದೆ.
ಮಣಿಪುರ ಸರ್ಕಾರವು ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ತಡೆಯಲು ಜು.10 ರ ಮಧ್ಯಾಹ್ನ 3 ರವರೆಗೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳ ಅಮಾನತನ್ನು ವಿಸ್ತರಿಸಿದೆ.
ಮೇ 3 ರಂದು ಜನಾಂಗೀಯ ಸಮುದಾಯಗಳ ನಡುವೆ ಘರ್ಷಣೆ ಪ್ರಾರಂಭವಾದಾಗ ಅಧಿಕಾರಿಗಳು ಮೊದಲ ಬಾರಿಗೆ ಈಶಾನ್ಯ ರಾಜ್ಯದಾದ್ಯಂತ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿದರು.