ಕೇರಳದ ಮಾಜಿ ಸ್ಪೀಕರ್‌ ವಕ್ಕಂ ಪುರುಷೋತ್ತಮನ್ ನಿಧನ
ತಿರುವನಂತಪುರ: ಹಿರಿಯ ಕಾಂಗ್ರೆಸ್‌ ನಾಯಕ, ಕೇರಳದ ಮಾಜಿ ಸ್ಪೀಕರ್‌ ವಕ್ಕಂ ಪುರುಷೋತ್ತಮನ್ (96) ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.
ಅವರು ಮಿಜೋರಾಂನ ರಾಜ್ಯಪಾಲರಾಗಿ ಹಾಗೂ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ಲೆಫ್ಟಿನಂಟ್‌ ಗವರ್ನರ್‌ ಆಗಿಯೂ ಸೇವೆ ಸಲ್ಲಿಸಿದ್ದರು. ಕೇರಳ ಸರ್ಕಾರದಲ್ಲಿ 1971-1977ರವರೆಗೆ, 1980 ರಿಂದ 1981ರವರೆಗೆ ಹಾಗೂ 2004 ರಿಂದ 2006ರವರೆಗೆ ಸಂಪುಟ ಸಚಿವರಾಗಿದ್ದರು. 1982- 1984 ರವರೆಗೆ ಹಾಗೂ 2001-2004ರವರೆಗೆ ಕೇರಳ ವಿಧಾನಸಭಾ ಸ್ಪೀಕರ್ ಆಗಿದ್ದರು.
ಪುರುಷೋತ್ತಮನ್‌ ನಿಧನಕ್ಕೆ ಕೇರಳ ವಿಧಾನಸಭಾ ಸ್ಪೀಕರ್‌ ಎ.ಎನ್‌ ಶಮ್ಸೀರ್‌, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ವಿರೋಧಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.
