ಇಂದು ಮೋದಿಗೆ ‘ಲೋಕಮಾನ್ಯ ತಿಲಕ್‌ ರಾಷ್ಟ್ರ ಪ್ರಶಸ್ತಿ’ ಪ್ರದಾನ
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪುಣೆಗೆ ಭೇಟಿ ನೀಡಲಿದ್ದಾರೆ. ದಗ್ದುಶೇತ್ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದು, ಬಳಿಕ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಪುಣೆ ಮೂಲದ ತಿಲಕ್‌ ಸ್ಮಾರಕ ಮಂದಿರ ಟ್ರಸ್ಟ್‌, ತಿಲಕರ 103ನೇ ಪುಣ್ಯತಿಥಿ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಲೋಕಮಾನ್ಯ ತಿಲಕ್‌ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲು ನಿರ್ಧರಿ ಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಲೋಕಮಾನ್ಯ ತಿಲಕರ ಪುಣ್ಯ ತಿಥಿಯಂದು ಅವರಿಗೆ ನಮನ ಸಲ್ಲಿಸುತ್ತೇನೆ. ಇಂದು ನಾನು ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ. ನಮ್ಮ ಇತಿಹಾಸದ ಮಹಾನ್ ವ್ಯಕ್ತಿತ್ವದ (ಬಾಲಗಂಗಾಧರ ತಿಲಕರು) ಕೆಲಸದೊಂದಿಗೆ ನಿಕಟ ಸಂಬಂಧ ಹೊಂದಿರುವ ಈ ಪ್ರಶಸ್ತಿ ನನಗೆ ದೊರೆತಿರುವುದಕ್ಕೆ ನಾನು ನಿಜಕ್ಕೂ ವಿನಮ್ರನಾಗಿದ್ದೇನೆ’ ಎಂದು ಬರೆದು ಕೊಂಡಿದ್ದಾರೆ.
ಇಂದು ಬೆಳಿಗ್ಗೆ ಪುಣೆಗೆ ತಲುಪಲಿರುವ ಪ್ರಧಾನಿ ಮೋದಿ ಅವರು ಮೊದಲು ದೇವರ ದರ್ಶನ ಮತ್ತು ಪೂಜೆ ನಡೆಸಲಿದ್ದಾರೆ. 11.45 ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಆ ಬಳಿಕ 12.45ಕ್ಕೆ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮಾಡಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕರ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ‘ತಿಲಕ ಸ್ಮಾರಕ ಮಂದಿರ ಟ್ರಸ್ಟ್‌’ 1983ರಲ್ಲಿ ಈ ಪ್ರಶಸ್ತಿಯನ್ನು ನೀಡಲಾರಂಭಿಸಿದೆ.
ಈ ಪ್ರಶಸ್ತಿಯನ್ನು ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಿದ ಮತ್ತು ದೇಶಕ್ಕೆ ಗಮನಾರ್ಹ ಮತ್ತು ಅಸಾಧಾರಣ ಕೊಡುಗೆ ನೀಡಿದವರಿಗೆ ಪ್ರದಾನ ಮಾಡಲಾಗುತ್ತದೆ. ಈ ಬಾರಿಯ ಪ್ರಶಸ್ತಿಗೆ ಭಾಜನರಾಗಿರುವ ಪ್ರಧಾನಿ ಮೋದಿ ಅವರು ಪ್ರಶಸ್ತಿ ಪಡೆದ 41ನೇ ವ್ಯಕ್ತಿಯಾಗಲಿದ್ದಾರೆ.
ಇದುವರೆಗೆ ಡಾ. ಶಂಕರ್‌ ದಯಾಳ್‌ ಶರ್ಮಾ, ಪ್ರಣಬ್‌ ಮುಖರ್ಜಿ, ಅಟಲ್‌ ಬಿಹಾರಿ ವಾಜಪೇಯಿ. ಇಂದಿರಾ ಗಾಂಧಿ, ಮನಮೋಹನ್‌ ಸಿಂಗ್‌. ಎನ್‌. ಆರ್‌ ನಾರಾಯಣ ಮೂರ್ತಿ. ಇ. ಶ್ರೀಧರನ್‌ ಸೇರಿ ಹಲವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.