ಹರಿಯಾಣ ಹಿಂಸಾಚಾರ: ಮನೆಗಳಲ್ಲೇ ಪ್ರಾರ್ಥನೆ ಮಾಡಿ ಎಂದ ಮಸೀದಿಗಳು
ನುಹ್‌:ಆರು ಜೀವಗಳನ್ನು ಬಲಿ ತೆಗೆದುಕೊಂಡ ಕೋಮು ಹಿಂಸಾಚಾರದ ನಂತರ ಹರಿಯಾಣದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿನ ಮಸೀದಿಗಳು ಶುಕ್ರವಾರದ ಪ್ರಾರ್ಥನೆಯನ್ನು ರದ್ದುಗೊಳಿಸಿದ್ದು, ಮನೆಗಳಲ್ಲೇ ತಮ್ಮ ಪ್ರಾರ್ಥನೆಗಳನ್ನು ಮಾಡಲು ಸಲಹೆ ನೀಡಿವೆ.
ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಮೆರವಣಿಗೆಯ ಸಂದರ್ಭದಲ್ಲಿ ಸೋಮವಾರ ಘರ್ಷಣೆಗಳು ನಡೆದ ನಂತರ ಹಿಂಸಾಚಾರವು ನೆರೆಯ ಗುರುಗ್ರಾಮ್‌ಗೂ ಹರಡಿತ್ತು, ಅಲ್ಲಿ ಹಲವಾರು ರೆಸ್ಟೋರೆಂಟ್‌ಗಳು ಮತ್ತು ಅಂಗಡಿ ಗಳನ್ನು ಧ್ವಂಸಗೊಳಿಸಿ ಸುಟ್ಟುಹಾಕಲಾಗಿತ್ತು.
ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಸ್ಥಳಗಳಲ್ಲಿ ಒಂದಾದ ಗುರುಗ್ರಾಮ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿಗಳು ಮತ್ತು ತೆರೆದ ಪ್ರದೇಶಗಳಲ್ಲಿ ನಮಾಜ್ ಮಾಡುವುದನ್ನು ತಡೆಯಲು ನಗರದ ಮುಸ್ಲಿಂ ಕೌನ್ಸಿಲ್ ಜನರನ್ನು ಒತ್ತಾಯಿಸಿದೆ.
ಗುರುಗ್ರಾಮ್‌ನ ಸೆಕ್ಟರ್ 57 ರಲ್ಲಿನ ಮಸೀದಿಯೊಂದಕ್ಕೆ ದಾಳಿ ನಡೆಸಿದ ಗುಂಪೊಂದು ಆ 1 ರ ತಡರಾತ್ರಿ ಬೆಂಕಿ ಹಚ್ಚಿ ಒಬ್ಬ ಧರ್ಮಗುರುವನ್ನು ಹತ್ಯೆಗೈದಿತ್ತು.
ಹಿಂಸಾಚಾರ ಪೀಡಿತ ನುಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಕ್ಕಾಗಿ ಹರಿಯಾಣ ಸರ್ಕಾರ ಗುರುವಾರ ಸಂಜೆ ವಲಸಿಗರ ಗುಡಿಸಲುಗಳನ್ನು ನೆಲಸಮಗೊಳಿಸಿದೆ.