ಮಾಜಿ ಆಪ್ತ ಕಾರ್ಯದರ್ಶಿ ವಿ.ಕೆ.ಪಾಂಡಿಯನ್‌ ಚೇರ್ಮನ್‌ 5ಟಿ ಆಗಿ ನೇಮಕ
ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಮಾಜಿ ಆಪ್ತ ಕಾರ್ಯದರ್ಶಿ ವಿ.ಕೆ.ಪಾಂಡಿಯನ್‌ ಅವರನ್ನು ಕ್ಯಾಬಿನೆಟ್‌ ದರ್ಜೆ ಸಚಿವರ ಶ್ರೇಣಿಯೊಂದಿಗೆ ಚೇರ್ಮನ್‌ 5ಟಿ ಆಗಿ ನೇಮಕ ಮಾಡಲಾಗಿದೆ.
ಪಾಂಡಿಯನ್ ಅವರು ತಮ್ಮ ಸೇವೆಯಿಂದ ಸ್ವಯಂ ನಿವೃತ್ತಿ ಘೋಷಿಸಿದ 24 ಗಂಟೆಯೊಳಗೆ ಈ ಬೆಳವಣಿಗೆ ನಡೆದಿದೆ.
‘ಕ್ಯಾಬಿನೆಟ್‌ ದರ್ಜೆ ಸಚಿವರ ಶ್ರೇಣಿಯೊಂದಿಗೆ ವಿ.ಕೆ ಪಾಂಡಿಯನ್‌ ಅವರನ್ನು ಚೇರ್ಮನ್‌ 5ಟಿ ಮತ್ತು ನಬಿನ್ ಒಡಿಶಾ ಆಗಿ ನೇಮಕಗೊಳಿಸಲಾಗಿದೆ. ಪಾಂಡಿಯನ್ ಅವರು ನೇರವಾಗಿ ಮುಖ್ಯಮಂತ್ರಿಯವರ ಅಡಿಯಲ್ಲಿ ಕೆಲಸ ಮಾಡುತ್ತಾರೆ’ ಎಂದು ಸಾಮಾನ್ಯ ಆಡಳಿತ ಮತ್ತು ಸಾರ್ವಜನಿಕ ಕುಂದು ಕೊರತೆ ಇಲಾಖೆ ತಿಳಿಸಿದೆ.
2011 ರಲ್ಲಿ ಮುಖ್ಯಮಂತ್ರಿ ಕಚೇರಿ ಸೇರಿದ್ದ ಪಾಂಡಿಯನ್, ಅಲ್ಲಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಖಾಸಗಿ ಆಪ್ತ ಕಾರ್ಯ ದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
2019ರಲ್ಲಿ ನವೀನ್‌ ಪಟ್ನಾಯಕ್‌ ಐದನೇ ಬಾರಿ ಮುಖ್ಯಮಂತ್ರಿ ಗದ್ದುಗೆಗೇರಿದ್ದು, ಆ ವೇಳೆ ಪಾಂಡಿಯನ್‌ ಅವರಿಗೆ ‘5ಟಿ ಕಾರ್ಯದರ್ಶಿ’ ಹೆಚ್ಚುವರಿ ಜವಾ ಬ್ದಾರಿಯನ್ನು ನೀಡಲಾಗಿತ್ತು.