ರೇಮಂಡ್‌ ಲಿಮಿಟೆಡ್‌ ನ ಗೌತಮ್‌ ಸಿಂಘಾನಿಯಾ 32 ವರ್ಷಗಳ ದಾಂಪತ್ಯ ಅಂತ್ಯ
ನವದೆಹಲಿ:ಕೈಗಾರಿಕೋದ್ಯಮಿ, ರೇಮಂಡ್‌ ಲಿಮಿಟೆಡ್‌ ನ ಅಧ್ಯಕ್ಷ, ಆಡಳಿತ ನಿರ್ದೇಶಕ ಗೌತಮ್‌ ಸಿಂಘಾನಿಯಾ ಅವರು ಪತ್ನಿ ನವಾಜ್‌ ಮೋದಿ ಸಿಂಘಾನಿಯಾ ಅವರಿಂದ ಪ್ರತ್ಯೇಕಗೊಂಡಿರುವುದಾಗಿ ಸೋಮವಾರ ತಿಳಿಸಿದ್ದಾರೆ. ಇದರೊಂದಿಗೆ ತಮ್ಮಿಬ್ಬರ 32 ವರ್ಷಗಳ ದಾಂಪತ್ಯ ಕೊನೆಗೊಂಡಿ ರುವುದಾಗಿ ಘೋಷಿಸಿದ್ದಾರೆ.
ಸಿಂಘಾನಿಯಾ ಅವರು ಪಾರ್ಸಿ ಜನಾಂಗದ ನವಾಜ್‌ ಮೋದಿ ಅವರನ್ನು 1999ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರು(ನಿಹಾರಿಕಾ, ನಿಶಾ ಸಿಂಘಾನಿಯಾ). ಗೌತಮ್‌ ಸಿಂಘಾನಿಯಾ ಚಿಕ್ಕಂದಿನಿಂದಲೇ ವಿಟಲಿಗೋ (ಬಿಳಿ ಚರ್ಮದ ವ್ಯಾಧಿ) ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಸುಮಾರು ಎಂಟು ವರ್ಷಗಳ ಕಾಲ ಸಿಂಘಾನಿಯಾ ಮತ್ತು ನವಾಜ್‌ ಸ್ನೇಹದಲ್ಲಿದ್ದು, 1999ರಲ್ಲಿ ಸಾಲಿಸಿಟರ್‌ ನಾಡಾರ್‌ ಮೋದಿ ಅವರ ಪುತ್ರಿ ನವಾಜ್‌ ಅವರನ್ನು ಸಿಂಘಾನಿಯಾ ವಿವಾಹವಾಗಿದ್ದರು.
ಇಬ್ಬರು ಯಾಕೆ ಬೇರೆಯಾಗುತ್ತಿದ್ದೇವೆ ಎಂಬುದಕ್ಕೆ ಸಿಂಘಾನಿಯಾ ಯಾವುದೇ ವಿವರಣೆ ನೀಡಿಲ್ಲ.
ಕಳೆದ ವಾರ ಥಾಣೆಯಲ್ಲಿರುವ ಸಿಂಘಾನಿಯಾ ನಿವಾಸದಲ್ಲಿ ನಡೆಯುತ್ತಿದ್ದ ದೀಪಾವಳಿ ಪಾರ್ಟಿಗೆ ಆಗಮಿಸಿದ್ದ ನವಾಜ್‌ ಅವರನ್ನು ಸೆಕ್ಯುರಿಟಿ ಒಳ ಬರಲು ತಡೆದು ವಾಪಸ್‌ ಕಳುಹಿಸಿದ್ದ ಘಟನೆ ನಡೆದಿತ್ತು.