ಸೋನಿಯಾ ಗಾಂಧಿ ತಾತ್ಕಾಲಿಕವಾಗಿ ಜೈಪುರಕ್ಕೆ ಶಿಫ್ಟ್‌
ಜೈಪುರ:ದೆಹಲಿಯಲ್ಲಿ ದಿನೇದಿನೆ ವಾಯುಮಾಲಿನ್ಯ ಪ್ರಮಾಣವು ಜಾಸ್ತಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ತಾತ್ಕಾಲಿಕವಾಗಿ ದೆಹಲಿಯಿಂದ ರಾಜಸ್ಥಾನದ ಜೈಪುರಕ್ಕೆ ಶಿಫ್ಟ್‌ ಆಗಿದ್ದಾರೆ.
ಉಸಿರಾಟ, ಎದೆ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರು ವೈದ್ಯರು ಹಾಗೂ ಕುಟುಂಬಸ್ಥರ ಸಲಹೆ ಮೇರೆಗೆ ದೆಹಲಿಯಿಂದ ಜೈಪುರಕ್ಕೆ ಶಿಫ್ಟ್‌ ಆಗಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ನವೆಂಬರ್‌ 14ರಂದು ಸಂಜೆ ಜೈಪುರ ತಲುಪಿರುವ ಸೋನಿಯಾ ಗಾಂಧಿ ಅವರು ಇನ್ನೂ ನಾಲ್ಕೈದು ದಿನ ಜೈಪುರದಲ್ಲಿಯೇ ಇರಲಿದ್ದಾರೆ. ‘ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಜೈಪುರಕ್ಕೆ ಆಗಮಿಸಿದ್ದಾರೆ. ಇನ್ನೂ ಕೆಲವು ದಿನ ಅವರು ಜೈಪುರದಲ್ಲಿಯೇ ಇರಲಿದ್ದಾರೆ.
ರಾಜಸ್ಥಾನ ಸೇರಿ ಹಲವೆಡೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ಜೈಪುರಕ್ಕೆ ತೆರಳಿದ್ದು ಆರಂಭದಲ್ಲಿ ಕುತೂಹಲ ಕೆರಳಿಸಿತ್ತು. ಬಳಿಕ, ಅವರು ಆರೋಗ್ಯ ದೃಷ್ಟಿಯಿಂದಾಗಿ ಮಾತ್ರ ಜೈಪುರದಲ್ಲಿ ತಂಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಸ್ಪಷ್ಟನೆ ನೀಡಿದರು. ಸೋನಿಯಾ ಗಾಂಧಿ ಅವರು ದೆಹಲಿ ವಾಯುಮಾಲಿನ್ಯ ಹೆಚ್ಚಾದ ಕಾರಣದಿಂದ 2020ರಲ್ಲೂ ಗೋವಾಗೆ ತೆರಳಿ, ಅಲ್ಲಿ ಕೆಲವು ವಾರ ತಂಗಿದ್ದರು.