ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎನ್.ಶಂಕರಯ್ಯ ನಿಧನ
ಚೆನ್ನೈ:ಸ್ವಾತಂತ್ರ್ಯ ಹೋರಾಟಗಾರ, ದೇಶದ ಹಿರಿಯ ಕಮ್ಯುನಿಸ್ಟ್ ನಾಯಕ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಎನ್.ಶಂಕರಯ್ಯ(101) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶಂಕರಯ್ಯ ಕಳೆದ ಒಂದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನವೆಂಬರ್ 13 ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ಶಂಕರಯ್ಯನವರು 10 ದಿನಗಳ ಹಿಂದಿನವರೆಗೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.
ಜುಲೈ 15, 1922 ರಂದು ಜನಿಸಿದ ಶಂಕರಯ್ಯ ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) 32 ರಾಷ್ಟ್ರೀಯ ಮಂಡಳಿ ಸದಸ್ಯರಲ್ಲಿ ಒಬ್ಬರಾಗಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಅವರು ಪಕ್ಷ ತೊರೆದರು. ಇದು 1964 ರಲ್ಲಿ ಸಿಪಿಐ (ಎಂ) ರಚನೆಗೆ ಕಾರಣವಾಯಿತು.
ಕೆಲ ತಿಂಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶಂಕರಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡುವುದಾಗಿ ಘೋಷಿಸಿದ್ದರು. ಮಧುರೈ ಕಾಮರಾಜ್ ವಿಶ್ವವಿದ್ಯಾಲಯವು ಡಾಕ್ಟರೇಟ್​ ನೀಡಬೇಕಿತ್ತು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶಂಕರಯ್ಯ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಶಂಕರಯ್ಯನವರು ರಾಜ್ಯ ಸಿಪಿಐನ (ಎಂ) ಅಧಿಕೃತ ಮುಖವಾಣಿ ತೀಕಥಿರ್‌ನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಕಮ್ಯುನಿಸ್ಟ್ ಪಕ್ಷದ ಇತರ ನಾಯಕರಂತೆ, ಅವರು ಸಹ ತಮ್ಮ ಸಮುದಾಯದ ಹೊರಗೆ ವಿವಾಹವಾದರು. ಅವರ ಪತ್ನಿ ನವಮಣಿ ಕ್ರಿಶ್ಚಿಯನ್ ಆಗಿದ್ದರು.
ಅವರ ಪಾರ್ಥಿವ ಶರೀರವನ್ನು ನವೆಂಬರ್ 15 ರಂದು ಮಧ್ಯಾಹ್ನ ಚೆನ್ನೈನ ಸಿಪಿಐ (ಎಂ) ರಾಜ್ಯ ಸಮಿತಿ ಕಚೇರಿಗೆ ತರಲಾಗುವುದು. ಮೃತರ ಅಂತ್ಯಕ್ರಿಯೆ ಗುರುವಾರದಂದು ನಡೆಯಲಿದೆ.