ಶಂಕರ ನೇತ್ರಾಲಯದ ಸಂಸ್ಥಾಪಕ ಡಾ.ಎಸ್‌.ಎಸ್.‌ಬದ್ರಿನಾಥ್‌ ನಿಧನ
ಚೆನ್ನೈ:ದೇಶಾದ್ಯಂತ ಸಾವಿರಾರು ಅಂಧರ ಬಾಳಿಗೆ ಬೆಳಕಾದ, ಲಕ್ಷಾಂತರ ಜನರ ಕಣ್ಣಿನ ಸಮಸ್ಯೆ ನೀಗಿಸಿದ ಖ್ಯಾತಿ ಹೊಂದಿರುವ ಶಂಕರ ನೇತ್ರಾಲಯದ ಸಂಸ್ಥಾಪಕ ಡಾ. ಎಸ್‌.ಎಸ್.‌ ಬದ್ರಿನಾಥ್‌ (83)ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
ಅವರು ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ ರಾಮ ಸುಗಂಧನ್‌ ಅವರು ಡಾ. ಎಸ್‌. ಎಸ್‌. ಬದ್ರಿನಾಥ್‌ ಅವರು ನಿಧನರಾಗಿರುವುದನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ದೃಢಪಡಿಸಿದ್ದಾರೆ. ‘ಶಂಕರ ನೇತ್ರಾಲಯದ ಸಂಸ್ಥಾಪಕ ಡಾ. ಎಸ್‌.ಎಸ್. ಬದ್ರಿನಾಥ್‌ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಡಾ. ಎಸ್‌.ಎಸ್. ಬದ್ರಿನಾಥ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಬಡ ರೋಗಿಗಳ ಕಣ್ಣಿನ ಸಮಸ್ಯೆಯನ್ನು ನೀಗಿದ, ಅವರ ಬಾಳಿಗೆ ಬೆಳಕಾದ ಮಹನೀಯರ ಕೊಡುಗೆ ಶ್ಲಾಘನೀಯ’ ಎಂದಿದ್ದಾರೆ.
ಕರ್ನಾಟಕದ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಶಂಕರ ನೇತ್ರಾಲಯಗಳಿವೆ.