ಜೈರಾಮ್ ರಮೇಶ್ ಕಾರಿನ ಮೇಲೆ ಬಿಜೆಪಿ ಬೆಂಬಲಿಗರ ದಾಳಿ
ಗುವಾಹಟಿ:ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಭಾನುವಾರ ಪಕ್ಷದ ನಾಯಕ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ಬಿಜೆಪಿ ಬೆಂಬಲಿಗರ ಗುಂಪು ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ ಭಾನುವಾರ, ಎರಡನೇ ಬಾರಿಗೆ ಅಸ್ಸಾಂಗೆ ಕಾಲಿಟ್ಟಿದೆ. ಬಿಸ್ವಂತ್ ಜಿಲ್ಲೆಯಿಂದ ಸೋನಿತ್‌ ಪುರ ಮೂಲಕ ನಗಾಂವ್‌ಗೆ ಪ್ರಯಾಣ ಬೆಳೆಸುತ್ತಿದೆ.
ಈ ವೇಳೆ ಯಾತ್ರೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ಬಿಜೆಪಿಯ ಗುಂಪು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸ್ವತಃ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ವಿಡಿಯೊ ಸಮೇತ ವಿವರಣೆ ನೀಡಿದ್ದಾರೆ.
ಈ ಕೃತ್ಯದ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕೈವಾಡ ಅಡಗಿದೆ. ಆದರೆ ಬಿಜೆಪಿಯ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಜೋಡೊ ನ್ಯಾಯ ಯಾತ್ರೆ ಜ.25ರವರೆಗೂ ಅಸ್ಸಾಂನಲ್ಲಿ ನಡೆಯಲಿದೆ.