ಕೇಂದ್ರದ ಮಾಜಿ ಸಚಿವ ಹರ್ಮೋಹನ್ ಧವನ್ ನಿಧನ
ನವದೆಹಲಿ:ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಹರ್ಮೋಹನ್ ಧವನ್ (83) ನಿಧನರಾಗಿದ್ದಾರೆ.
ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಸರ್ಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ ದ್ದರು.
ನಂತರ ಅವರು ಕಾಂಗ್ರೆಸ್, ಬಿಎಸ್ಪಿ ಮತ್ತು ಬಿಜೆಪಿ ಸೇರಿದರು. ಆದಾಗ್ಯೂ, ಈಗ ಅವರು ಅಮ್ ಆದ್ಮಿ ಪಕ್ಷದೊಂದಿಗೆ (ಎಎಪಿ) ಸಂಬಂಧ ಹೊಂದಿದ್ದರು. ಹರ್ಮೋಹನ್ ಧವನ್ ಚಂಡೀಗಢದಿಂದ ಸಂಸತ್ ಸದಸ್ಯ ಮತ್ತು ಕೇಂದ್ರ ಸಚಿವರಾಗಿದ್ದರು.
1970 ರಲ್ಲಿ ಅವರು ಸಣ್ಣ ಪ್ರಮಾಣದ ಕೈಗಾರಿಕಾ ಘಟಕವನ್ನು ಪ್ರಾರಂಭಿಸಿದರು. 1979ರಲ್ಲಿ ಮೆಹಿಲ್ ಎಂಬ ರೆಸ್ಟೋರೆಂಟ್ ಅನ್ನು ತೆರೆದರು. ಹರ್ಮೋಹನ್ ಧವನ್ 1977 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ದಿವಂಗತ ಪ್ರಧಾನಿ ಚಂದ್ರಶೇಖರ್ ಅವರಿಂದ ಮಾರ್ಗದರ್ಶನ ಪಡೆದಿದ್ದರು. ಅವರು 1981 ರಲ್ಲಿ ಜನತಾ ಪಕ್ಷದ ಅಧ್ಯಕ್ಷರಾದರು. 1989 ರಲ್ಲಿ ಅವರು ಚಂಡೀಗಢ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು ಮತ್ತು ಚಂದ್ರ ಶೇಖರ್ ಅವರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದರು.
ಅವರು 14 ಜುಲೈ 1940 ರಂದು ಕ್ಯಾಂಪ್ಬೆಲ್ಪುರದ ಫತೇಜಂಗ್ ಜಿಲ್ಲೆಯಲ್ಲಿ (ಈಗ ಪಶ್ಚಿಮ ಪಾಕಿಸ್ತಾನದಲ್ಲಿದೆ) ಜನಿಸಿದ್ದರು. 1947 ರಲ್ಲಿ ಭಾರತ ವಿಭಜನೆಯ ನಂತರ ಅವರ ಕುಟುಂಬ ಭಾರತಕ್ಕೆ ಬಂದಿತು.