‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ರೈತ ಹೃದಯಾಘಾತದಿಂದ ನಿಧನ
ಪಂಜಾಬ್:ರೈತರು ನಡೆಸುತ್ತಿರುವ ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ 79 ವರ್ಷದ ರೈತ ಜ್ಞಾನ್ ಸಿಂಗ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಕಾನೂನುಬದ್ಧಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ರೈತರು ನಡೆಸುತ್ತಿರುವ ದೆಹಲಿ ಚಲೋ ಆಂದೋಲನವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಮೂರು ರಾಜ್ಯಗಳ ರೈತರು ಪಂಜಾಬ್-ಹರಿಯಾಣದ ಶಂಭೂ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ಧರಣಿ ನಿರತ ಪಂಜಾಬ್‌ನ ಗುರುದಾಸ್‌ ಪುರ ಜಿಲ್ಲೆಯ ನಿವಾಸಿ ರೈತ ಜ್ಞಾನ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಜ್ಞಾನ್ ಸಿಂಗ್ ಅವರಿಗೆ ಗುರುವಾರ ಸಂಜೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.