ಖರ್ಗೆ, ಜೈರಾಮ್ ರಮೇಶ್’ಗೆ ಗಡ್ಕರಿ ಲೀಗಲ್ ನೋಟೀಸ್
ನಾಗ್ಪುರ:ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಸುಳ್ಳು ಮಾಹಿತಿ ಮತ್ತು ಅವಹೇಳನಕಾರಿ ವಿಡಿಯೋವನ್ನು ಹರಡುತ್ತಿದೆ ಎಂದು ಆರೋಪಿಸಿ, ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಈ ನೋಟಿಸ್‍ ನೀಡಲಾಗಿದೆ.
ಕಾಂಗ್ರೆಸ್‍ನ ಹಿರಿಯ ನಾಯಕರು ಪಕ್ಷ ಸೇರಿದಂತೆ ಅವರ ವೈಯಕ್ತಿಕ ಎಕ್ಸ್ ಖಾತೆಯಲ್ಲಿ ತಮ್ಮ ವಿರುದ್ಧದ ಸುಳ್ಳು ಮಾಹಿತಿಯುಳ್ಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಿಂದ ತಮಗೆ ಅಪಖ್ಯಾತಿ ತಂದಿದ್ದಾರೆ ಎಂದು ಕೇಂದ್ರ ಸಚಿವರು ದೂರಿದ್ದಾರೆ. ವೆಬ್‍ಪೋರ್ಟಲ್‍ವೊಂದಕ್ಕೆ ತಾವು ನೀಡಿರುವ ಸಂದರ್ಶನದ 19 ಸೆಕೆಂಡ್‍ಗಳ ವಿಡಿಯೋವನ್ನು ತಿರುಚಿ ಸಂದರ್ಭೋಚಿತ ವಾಕ್ಯ, ಪದಗಳನ್ನು ಕತ್ತರಿಸಿ ತಪ್ಪಾಗಿ ಅರ್ಥೈಸುವಂತೆ ಮಾಡಿ ಕಾಂಗ್ರೆಸ್ ಅಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈ ದೃಶ್ಯವನ್ನು ಹಂಚಿಕೊಳ್ಳಲಾಗಿದೆ.
ವಿಡಿಯೋ ತುಣುಕಿನಲ್ಲಿ ಪದಗಳ ಸಂದರ್ಭೋಚಿತ ಉದ್ದೇಶ ಮತ್ತು ಅರ್ಥವನ್ನು ಮರೆಮಾಚಲಾಗಿದೆ. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ನಡುವೆ ಬಿರುಕು ಮೂಡಿಸಲು ಪ್ರಯತ್ನ ನಡೆಸಲಾಗಿದೆ ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.