ಜನೌಷಧ ಕೇಂದ್ರ ತೆರೆಯುವವರ ನೆರವಿಗೆ  ಸಾಲ ಯೋಜನೆ
ನವದೆಹಲಿ:‘ಜನೌಷಧ ಕೇಂದ್ರ ತೆರೆಯುವವರ ವ್ಯಾವಹಾರಿಕ ಜಾಲವನ್ನು ಇನ್ನಷ್ಟು ವಿಸ್ತರಿಸಲು ನೆರವಾಗುವಂತೆ  ಸಾಲ ಯೋಜನೆ ಪರಿಚಯಿಸಲಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ.
ಈ ಯೋಜನೆಗಾಗಿ ಪ್ರತ್ಯೇಕ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿ ಮಾತನಾಡಿ, ‘ಈ ಸಾಲ ಯೋಜನೆಯು ಸಣ್ಣ ಪ್ರಮಾಣದಲ್ಲಿ ಜನೌಷಧ ಕೇಂದ್ರಗಳನ್ನು ಆರಂಭಿಸುವವರಿಗೆ ಯಾವುದೇ ಮೇಲಾಧಾರವಿಲ್ಲದೆ ನೀಡಲಾಗುತ್ತದೆ. ಮೂಲ ಬಂಡವಾಳ ಅಥವಾ ಟರ್ಮ್ ಲೋನ್ ಮೇಲೆ ಈ ಸಾಲದ ಗ್ಯಾರಂಟಿಯನ್ನು ಸೂಕ್ಷ್ಮ ಹಾಗೂ ಸಣ್ಣ ಬಂಡವಾಳಗಾರರ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್‌ನಿಂದ ನೀಡಲಾಗುತ್ತದೆ’ ಎಂದರು.
‘ಯಾವುದೇ ಸಮಾಜದಲ್ಲಿ ಔಷಧವು ಕೈಗೆಟಕುವ ಬೆಲೆ ಮತ್ತು ಸುಲಭವಾಗಿ ದೊರಕುವಂತಿರಬೇಕು. 2014ರಲ್ಲಿ 80 ಜನೌಷಧ ಕೇಂದ್ರಗಳೊಂದಿಗೆ ಆರಂಭವಾದ ಈ ಯೋಜನೆಯು, ಈಗ ದೇಶದಾದ್ಯಂತ 11 ಸಾವಿರ ಮಳಿಗೆಗಳು ಕಾರ್ಯಾರಂಭ ಮಾಡಿವೆ’ ಎಂದು ಹೇಳಿದ್ದಾರೆ.
‘ಪ್ರತಿದಿನ ಜನೌಷಧ ಕೇಂದ್ರಗಳಿಗೆ 10ರಿಂದ 12 ಲಕ್ಷ ಜನ ಭೇಟಿ ನೀಡುತ್ತಿದ್ದಾರೆ. ಅವರಿಗೆ ಅಗತ್ಯವಿರುವ ಔಷಧಗಳೂ ಸಿಗುತ್ತಿವೆ. ಜನೌಷಧ ಕೇಂದ್ರಗಳಿಗೆ ಔಷಧ ಪೂರೈಕೆ ಹಾಗೂ ವಿವಿಧ ಬಗೆಯ ಔಷಧಗಳ ಲಭ್ಯತೆ ಹೆಚ್ಚಿಸುವುದು, ಇರುವ ಔಷಧಗಳ ದಾಸ್ತಾನು ಕಾಪಾಡುವುದು ಸೇರಿದಂತೆ ಅವುಗಳ ಬಲವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಕ್ರಮ ವಹಿಸಿದೆ’ ಎಂದು ತಿಳಿಸಿದರು.
‘2026ರ ಮಾರ್ಚ್‌ 31ರೊಳಗೆ ದೇಶದಲ್ಲಿ 25 ಸಾವಿರ ಜನೌಷಧ ಕೇಂದ್ರಗಳನ್ನು ಪ್ರಾರಂಭಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. 2024ರ ಜ. 31ರವರೆಗೆ 10,624 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆ ಮೂಲಕ ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ನಾಗರಿಕರ ₹28 ಸಾವಿರ ಕೋಟಿಯಷ್ಟು ಉಳಿಸಿದೆ’ ಎಂದು ತಿಳಿಸಿದ್ದಾರೆ.