  : ಕೋಲ್ಕತ್ತಾದಲ್ಲಿ ಮತ್ತೆ ವೈದ್ಯರ ಮುಷ್ಕರ; ವಿವಿಧ ಬೇಡಿಕೆಗಳಿಗೆ ಆಗ್ರಹ
ಕೋಲ್ಕತ್ತಾ:ಕೋಲ್ಕತ್ತಾ ಟ್ತೈನಿ ವೈದ್ಯೆ ಕೊಲೆ ಅತ್ಯಾಚಾರ ಪ್ರಕರಣ(  ) ಖಂಡಿಸಿ ವೈದ್ಯರು ಇಂದಿನಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗದೇ (  ) ಮುಷ್ಕರ ಆರಂಭಿಸಿದ್ದಾರೆ. ವೈದ್ಯರಿಗೆ  ಸುರಕ್ಷತೆ ಮತ್ತು ಭದ್ರತೆ ಸೇರಿದಂತೆ ಹತ್ತು ಹಲವು ಬೇಡಿಕೆಗಳೊಂದಿಗೆ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕೋಲ್ಕತ್ತಾದ ಜೂನಿಯರ್‌ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ಧಾರೆ..
ಈ ಬಗ್ಗೆ ಪಶ್ಚಿಮ ಬಂಗಾಳ ಕಿರಿಯ ವೈದ್ಯರ ಸಂಘಟನೆ ಪ್ರಕಟಣೆ ಹೊರಡಿಸಿದ್ದು, ಇಂದಿನಿಂದ ಮತ್ತೆ ಪ್ರತಿಭಟನೆಗೆ ಮುಂದಾಗುತ್ತಿದ್ದೇವೆ. ಸುರಕ್ಷತೆ, ರೋಗಿಗಳ ಸೇವೆಗಳು ಮತ್ತು ಭಯದ ರಾಜಕೀಯದ ಬಗ್ಗೆ ನಾವು ಸರ್ಕಾರದಿಂದ ಸ್ಪಷ್ಟ ಕ್ರಮವನ್ನು ಪಡೆದಿಲ್ಲ. ಹೀಗಾಗಿ ನಮ್ಮ ಮುಷ್ಕರವನ್ನು ಮುಂದುವರಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದಿದ್ದಾರೆ.
42 ದಿನಗಳ ಪ್ರತಿಭಟನೆಯ ನಂತರ ಕಿರಿಯ ವೈದ್ಯರು ಸೆಪ್ಟೆಂಬರ್ 21 ರಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಭಾಗಶಃ ತಮ್ಮ ಕರ್ತವ್ಯಕ್ಕೆ ಮರಳಿದ್ದರು. ವೈದ್ಯರ ಸುರಕ್ಷತೆ ಮತ್ತು ಭದ್ರತೆಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಮಾರ್ಗವನ್ನು ನಾವು ನೋಡುತ್ತಿಲ್ಲ. ಇಂದು ಪ್ರತಿಭಟನೆಯ 52 ನೇ ದಿನವಾಗಿದೆ ಮತ್ತು ನಮ್ಮ ಮೇಲೆ ಇನ್ನೂ ದಾಳಿಗಳೂ ನಡೆಯುತ್ತಿವೆ. ಆದರೂ ಸರ್ಕಾರದಿಂದ ಯಾವುದೇ ಕ್ರಮ ಕಂಡು ಬರುತ್ತಿಲ್ಲ ಹೀಗಾಗಿ ಪ್ರತಿಭಟನೆ, ಮುಷ್ಕರವೊಂದೇ ದಾರಿ ಎಂದು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಉತ್ತರ 24 ಪರಗಣದ ಸಾಗೋರ್ ದತ್ತಾ ಆಸ್ಪತ್ರೆಯಲ್ಲಿ ದುಷ್ಕರ್ಮಿಗಳ ತಂಡವೊಂದು ಕಿರಿಯ ವೈದ್ಯರು ಮತ್ತು ನರ್ಸ್‌ಗಳ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಸಾಗಿಸಲ್ಪಟ್ಟ ಮಹಿಳೆಯೊಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು. ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆಯ ಕಿರಿಯ ವೈದ್ಯರು ಮತ್ತು ನರ್ಸ್‌ಗಳ ಮೇಲೆ ಹಲ್ಲೆ ನಡೆಸಿದ್ದರು. ಕೆಲವು ವೈದ್ಯರು ಮತ್ತು ನರ್ಸ್‌ಗಳು ಗಾಯಗೊಂಡಿದ್ದರೆ, ದಾಳಿಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಟ್ರೈನಿ ವೈದ್ಯೆ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿರುವ ವೈದ್ಯರ ಒತ್ತಾಯಕ್ಕೆ ಕೊನೆಗೂ ಮಮತಾ ಬ್ಯಾನರ್ಜಿ ಸರ್ಕಾರ ಮಣಿದಿದೆ. ವೈದ್ಯರ ಬೇಡಿಕೆಯಂತೆ ಕೋಲ್ಕತ್ತಾ ಪೊಲೀಸ್‌ ಕಮಿಷನರ್‌ ಮತ್ತು ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಸುದ್ದಿಯನ್ನೂ ಓದಿ:  : 38 ದಿನಗಳ ಪ್ರತಿಭಟನೆ ಇಂದೇ ಅಂತ್ಯ? ಕೋಲ್ಕತ್ತಾ ವೈದ್ಯರ ನಿರ್ಧಾರ ಏನು?