ಬಾರ್ ಅಸೋಸಿಯೇಷನ್ ​​ಅಧ್ಯಕ್ಷ ಚುನಾವಣೆ: ಕಪಿಲ್ ಸಿಬಲ್’ಗೆ ಜಯ
ನವದೆಹಲಿ:ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ, ಕಾಂಗ್ರೆಸ್‌ ನಾಯಕ ಕಪಿಲ್ ಸಿಬಲ್ ಜಯಗಳಿಸಿದ್ದಾರೆ.
ಬರೋಬ್ಬರಿ 23 ವರ್ಷಗಳ ಬಳಿಕ ಮತ್ತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರಾಯ್ ಅವರನ್ನು ಸೋಲಿಸುವ ಮೂಲಕ ವಿಜಯಿಯಾದರು.
ಪ್ರದೀಪ್ ರಾಯ್ 689 ಮತ ಗಳಿಸಿದರೆ, ಕಪಿಲ್ ಸಿಬಲ್ ಅವರು 1066 ಮತ ಗಳಿಸಿದರು. ಹಾಲಿ ಅಧ್ಯಕ್ಷ, ಹಿರಿಯ ವಕೀಲ ಡಾ. ಆದೀಶ್ ಸಿ ಅಗರವಾಲಾ ಅವರು 296 ಮತಗಳನ್ನು ಪಡೆದಿದ್ದಾರೆ. ಪ್ರಿಯಾ ಹಿಂಗೋರಾಣಿ, ತ್ರಿಪುರಾರಿ ರೇ ಮತ್ತು ನೀರಜ್ ಶ್ರೀವಾಸ್ತವ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ನಾಲ್ಕನೇ ಬಾರಿಗೆ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು 1995-96, 1997-98 ಮತ್ತು 2001ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಭಿನಂದಿಸಿದ್ದು, ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮುಂದುವರೆಸುವಂತೆ ವಿನಂತಿಸಿ ದ್ದಾರೆ.
ಈ ಮಹತ್ವದ ಸಂಸ್ಥೆಯಲ್ಲಿ ನಿಮ್ಮ ಗೆಲುವಿನ ಬಗ್ಗೆ ನಮಗೆ ಹೆಮ್ಮೆ ಇದೆ. ಎಲ್ಲರೂ ಪ್ರಜಾಪ್ರಭುತ್ವಕ್ಕಾಗಿ ನಮ್ಮ ಹೋರಾಟವನ್ನು ಮುಂದುವರೆಸೋಣ ಎಂದು ಮಮತಾ ಬ್ಯಾನರ್ಜಿ ಹೇಳಿದರು.