ತ್ರಿಶ್ಯೂರಿನಲ್ಲಿ ನಟ ಸುರೇಶ್‌ ಗೋಪಿ, ರಾಹುಲ್‌ ಗಾಂಧಿ ವಯನಾಡಿನಲ್ಲಿ ಮುನ್ನಡೆ
ತಿರುವನಂತಪುರಂ:ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಈ ಬಾರಿ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎನ್ನಲಾಗಿದೆ.
ಸದ್ಯ ಬಿಜೆಪಿ ಕೇರಳದ ಒಂದು ಕಡೆ ಲೀಡ್‌ನಲ್ಲಿದೆ. ತ್ರಿಶ್ಯೂರಿನಲ್ಲಿ ಬಿಜೆಪಿ ಅಭ್ಯರ್ಥಿ, ನಟ ಸುರೇಶ್‌ ಗೋಪಿ ಇದೀಗ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ವಿ.ಎಸ್.ಸುನೀಲ್ ಕುಮಾರ್ ಮತ್ತು ಕಾಂಗ್ರೆಸ್‌ನಿಂದ ಕೆ.ಮುರಳೀಧರನ್ ಕಣಕ್ಕಿಳಿದಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಇಲ್ಲಿ ತೀವ್ರ ಪೈಪೋಟಿ ನಡೆದಿತ್ತು.
ಕಾಂಗ್ರೆಸ್‌ ಅಭ್ಯರ್ಥಿ ಟಿ.ಎಸ್.ಪಾರ್ಥಪನ್ 93,633 ಮತಗಳ ಗೆಲುವಿನ ಅಂತರದಿಂದ ಗೆದ್ದಿದ್ದರು. ಅವರು 4,15,089 ಮತಗಳನ್ನು ಗಳಿಸಿದ್ದರು. 3,21,456 ಮತಗಳನ್ನು ಪಡೆದ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಅವರನ್ನು ಟಿ.ಎಸ್.ಪಾರ್ಥಪನ್ ಸೋಲಿಸಿದ್ದರು.
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿದ್ದು, ಮುನ್ನಡೆ ಸಾಧಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಪಿ.ಪಿ.ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ತಿರುವನಂತಪುರಂನಲ್ಲಿ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌ನಿಂದ ಹಿರಿಯ ನಾಯಕ ಶಶಿ ತರೂರರ್‌ ಸ್ಪರ್ಧಿಸುತ್ತಿದ್ದಾರೆ. ಶಶಿ ತರೂರ್‌ ಅವರಿಗೆ ಇದು ನಾಲ್ಕನೇ ಸ್ಪರ್ಧೆ. ಸದ್ಯ ಶಶಿ ತರೂರ್‌ ಅವರು ಮುನ್ನಡೆ ಸಾಧಿಸಿದ್ದಾರೆ.
ಸದ್ಯ ಕೇರಳದಲ್ಲಿ ಯುಡಿಎಫ್‌ 18, ಎಲ್‌ಡಿಎಫ್‌ ಮತ್ತು ಎನ್‌ಡಿಎ ತಲಾ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. 2019ರಲ್ಲಿ ಕೇರಳದಲ್ಲಿ ಯುಡಿಎಫ್‌ 19 ಮತ್ತು ಎಲ್‌ಡಿಎಫ್‌ 1 ಕಡೆ ಗೆದ್ದುಕೊಂಡಿತ್ತು. ಈ ಬಾರಿ ಇಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.