ಜು.8-10ರಂದು ಪ್ರಧಾನಿ ಮೋದಿ ರಷ್ಯಾ, ಆಸ್ಟ್ರಿಯಾ ಪ್ರವಾಸ
ನವದೆಹಲಿ :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜು.8-10ರಂದು ರಷ್ಯಾ ಒಕ್ಕೂಟ ಮತ್ತು ಆಸ್ಟ್ರಿಯಾ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.
22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ ನಡೆಸಲು ರಷ್ಯಾ ಒಕ್ಕೂಟದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಯವರು 2024ರ ಜುಲೈ 08-09 ರಂದು ಮಾಸ್ಕೋಗೆ ಭೇಟಿ ನೀಡಲಿದ್ದಾರೆ.
ನಾಯಕರು ಉಭಯ ದೇಶಗಳ ನಡುವಿನ ಬಹುಮುಖಿ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಲಿದ್ದಾರೆ.
ಬಳಿಕ ಜು.9-10ರ ಅವಧಿಯಲ್ಲಿ ಆಸ್ಟ್ರಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 41 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ವೇಳೆ ಮೋದಿ, ಆಸ್ಟ್ರಿಯಾ ಗಣರಾಜ್ಯದ ಅಧ್ಯಕ್ಷರಾದ ಅಲೆಕ್ಸಾಂಡರ್ ವಾನ್ ಡೆರ್ ಬೆಲೆನ್ ಅವರನ್ನ ಮತ್ತು ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಪ್ರಧಾನಮಂತ್ರಿ ಮತ್ತು ಚಾನ್ಸಲರ್ ಅವರು ಭಾರತ ಮತ್ತು ಆಸ್ಟ್ರಿಯಾದ ವಾಣಿಜ್ಯ ನಾಯಕರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.