ಚಮೋಲಿಯಲ್ಲಿ ಭೀಕರ ಭೂಕುಸಿತ: ಕಾರ್ಮಿಕರು ಕೂದಲೆಳೆ ಅಂತರದಿಂದ ಪಾರು
ಡೆಹ್ರಾಡೂನ್‌:ಉತ್ತರಾಖಂಡದ ಚಮೋಲಿಯಲ್ಲಿ ಗುರುವಾರ ಭೀಕರ ಭೂಕುಸಿತ ಸಂಭವಿಸಿದ್ದು, ಬದ್ರಿನಾಥ್ ಹೆದ್ದಾರಿಯನ್ನು ದುರಸ್ತಿ ಪಡಿಸುತ್ತಿದ್ದ ಕಾರ್ಮಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಸದ್ಯ ಈ ಭೀಕರ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ.
ಇತ್ತೀಚೆಗೆ ಮಣ್ಣು ಜರಿದು ಬದ್ರಿನಾಥ್ ಹೆದ್ದಾರಿಗೆ ಬಿದ್ದಿದ್ದು, ಇದನ್ನು ತೆರವುಗೊಳಿಸುವ ವೇಳೆ ಈ ಘಟನೆ ನಡೆದಿದೆ. ಬಂಡೆಗಳು ಕೆಳಗೆ ಜಾರುತ್ತಿರುವು ದನ್ನು ನೋಡಿದ ಕಾರ್ಮಿಕರು ಬೆಟ್ಟದಿಂದ ಕೆಳಗೆ ಧಾವಿಸಿದ್ದರಿಂದ ದೊಡ್ಡ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಮಳೆಯಾಗದಿದ್ದರೂ ಬೃಹತ್‌ ಪ್ರಮಾಣ ದಲ್ಲಿ ಮಣ್ಣು ಜರಿದು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ವಿಡಿಯೊ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಕಾರ್ಮಿಕರು ಅಕ್ಷರಶಃ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ ಎಂದು ಉದ್ಘರಿಸಿದ್ದಾರೆ.
ಪಾತಾಳಗಂಗಾದಲ್ಲಿ ಹೆದ್ದಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ಜೋಶಿಮಠ್ ಬಳಿಯ ಭೂಕುಸಿತದಿಂದ ಪಾತಾಳಗಂಗಾ ಲಾಂಗ್ಸಿ ಸುರಂಗ ಮುಚ್ಚಿದೆ. ‘ಜೋಶಿಮಠದ ಭನೇರ್ಪಾನಿಯಲ್ಲಿ ರಸ್ತೆಯ ಮೇಲೆ ಬೆಟ್ಟದಿಂದ ಭಾರಿ ಗಾತ್ರದ ಬಂಡೆಗಳು ಬಿದ್ದ ಕಾರಣ ಬದ್ರಿನಾಥ್‌ ಹೆದ್ದಾರಿ 7ರಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಹಿಮಾಂಶು ಖುರಾನಾ ತಿಳಿಸಿದ್ದಾರೆ.
ಭೂಕುಸಿತದಿಂದಾಗಿ ಸದ್ಯ ಬದ್ರಿನಾಥ್‌, ಜೋಶಿಮಠ, ನಿತಿ, ಮಾನಾ, ತಪೋವನ್, ಮಲರಿ, ಲತಾ, ರೈನಿ, ಪಾಂಡುಕೇಶ್ವರ ಮತ್ತು ಹೇಮಕುಂಡ್ ಸಾಹಿಬ್ ಸಂಪರ್ಕ ಕಡಿತಗೊಂಡಿದೆ. ಬದ್ರಿನಾಥ್‌ ಮತ್ತು ಹೇಮಕುಂಡ್ ಸಾಹಿಬ್‌ಗೆ ಹೋಗುವ ಅಥವಾ ಹಿಂದಿರುಗುವ 2,000ಕ್ಕೂ ಹೆಚ್ಚು ಪ್ರಯಾಣಿಕರು ಹೆದ್ದಾರಿ ಯಲ್ಲಿ ಸಿಲುಕಿಕೊಂಡಿದ್ದಾರೆ. ಜೋಶಿಮಠದಲ್ಲಿ ರಸ್ತೆಯನ್ನು ತೆರವುಗೊಳಿಸುತ್ತಿರುವ ಬಾರ್ಡರ್ ರೋಡ್ ಆರ್ಗನೈಸೇಶನ್ () ಅವಶೇಷಗಳನ್ನು ತೆಗೆದುಹಾಕಲು 241 ಯಂತ್ರಗಳನ್ನು ನಿಯೋಜಿಸಿದೆ.
ಮಳೆ ಮತ್ತು ಭೂಕುಸಿತದಿಂದಾಗಿ ಉತ್ತರಾಖಂಡದಲ್ಲಿ ಒಟ್ಟು 260ಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ.