ಮುಂಗಾರು ಮಳೆಯ ಋತುವಿನಲ್ಲಿ ಹೆಚ್ಚಿದ ಡೆಂಘೀ ಜ್ವರದ ಪ್ರಕರಣಗಳು ಬೆಂಗಳೂರಿಗರಿಗೆ ಆತಂಕ
ಡೆಂಘೀ ಜ್ವರದ ಪ್ರಕರಣಗಳ ಸಂಖ್ಯೆ ಮುಂಗಾರು ಮಳೆಯ ಋತುವಿನಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿದ್ದು, ಬೆಂಗಳೂರು ಪ್ರಸ್ತುತ ಈ ಪ್ರಕರಣಗಳಲ್ಲಿ ವಿಪರೀತ ಹೆಚ್ಚಳ ಕಾಣುತ್ತಿದೆ. ಕಳೆದ ಕೆಲವು ವಾರಗಳಲ್ಲಿ ನಗರದ ಆಸ್ಪತ್ರೆಗಳಲ್ಲಿ ಡೆಂಘೀ ಕಾರಣದಿಂದ ಪ್ರವೇಶ ಪಡೆದಿರುವವರ ಸಂಖ್ಯೆ ಗಮನಾರ್ಹ ವಾಗಿ ಹೆಚ್ಚಿದೆ. ಅನೇಕ ರೋಗಿಗಳಿಗೆ ಆಸ್ಪತ್ರೆಯಲ್ಲಿನ ಆರೈಕೆಯ ಅಗತ್ಯವಿರುತ್ತದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದರಿ೦ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಶುಶ್ರೂಷೆ ನೀಡಲಾಗುತ್ತಿದೆ.
ಈ ಋತುವಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಲು ಹಲವಾರು ಅಂಶಗಳು ಕೊಡುಗೆ ನೀಡುತ್ತವೆ. ಮುಂಗಾರು ಮಳೆಯಿಂದ ಹಲವಾರು ಕಡೆ ನೀರಿನ ಹೊಂಡಗಳು ಸೃಷ್ಟಿಯಾಗುತ್ತವೆ. ಇವು ಪ್ರಾಥಮಿಕವಾಗಿ ಡೆಂಘೀ ವೈರಸ್ ಅನ್ನು ಹರಡುವಂತಹ ಏಡೆಸ್ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಮುಂಗಾರು ಸಂದರ್ಭದಲ್ಲಿ ಆರ್ದ್ರತೆಯುಳ್ಳ ವಾತಾವರಣ ಕೂಡ ಸೊಳ್ಳೆಗಳ ಹೆಚ್ಚಳಕ್ಕೆ ಸೂಕ್ತ ವಾತಾವರಣವನ್ನು ಪೂರೈಸುತ್ತವೆ. ಹೆಚ್ಚುವರಿಯಾಗಿ ನಗರೀಕರಣ ಮತ್ತು ಬೆಂಗಳೂರಿನಲ್ಲಿನ ಜನದಟ್ಟಣೆ ವೈರಸ್ ಹರಡಲು ಹೆಚ್ಚಿನ ಅವಕಾಶ ಮಾಡಿಕೊಡುತ್ತದೆ. ಜನದಟ್ಟಣೆಯ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚುತ್ತವೆಯಲ್ಲದೆ, ಕಳಪೆ ನೈರ್ಮಲ್ಯ ಮತ್ತು ಸೂಕ್ತ ತ್ಯಾಜ್ಯ ನಿರ್ವಹಣೆ ಇಲ್ಲದ ಪ್ರದೇಶಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ.
ಡೆಂಘೀ ಜ್ವರ ಹರಡುವುದನ್ನು ತಡೆಯಲು ಅದನ್ನು ತಡೆಯುವ ಕ್ರಮಗಳು ಮುಖ್ಯವಾಗಿರುತ್ತವೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಸ್ಥಳಗಳನ್ನು ಇಲ್ಲವಾಗಿಸುವ ಪ್ರಾಮುಖ್ಯತೆಗೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಒತ್ತು ನೀಡುತ್ತಿದ್ದಾರೆ. ಜನರು ತಮ್ಮ ಮನೆಗಳ ಸುತ್ತ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು ಮತ್ತು ಅವರು ನೀರು ದಾಸ್ತಾನು ಮಾಡುವ ಪಾತ್ರೆಗಳನ್ನು ನಿಗದಿತವಾಗಿ ಸ್ವಚ್ಚಗೊಳಿಸುತ್ತಿರಬೇಕು ಎಂದು ಆಗ್ರಹಿಸಲಾಗಿದೆ. ಇದರೊಂದಿಗೆ ಜನರು ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಖಾತ್ರಿ ಮಾಡಿಕೊಳ್ಳಲಾಗುತ್ತಿದೆ. ಸೊಳ್ಳೆ ನಿರೋಧಕಗಳ ಬಳಕೆ, ಸಂರಕ್ಷಣಾತ್ಮಕ ಉಡುಪು ಗಳನ್ನು ಧರಿಸುವುದು ಮತ್ತು ಕಿಟಕಿಗಳು ಮತ್ತು ಬಾಗಿಲುಗಳಲ್ಲಿ ಪರದೆಗಳನ್ನು ಅಳವಡಿಸುವುದರಿಂದ ಸೊಳ್ಳೆ ಕಡಿತದ ಅಪಾಯವನ್ನು ಕಡಿಮೆ ಮಾಡಬಹುದು.
ನಿಗದಿತವಾಗಿ ಸೊಳ್ಳೆ ನಿರೋಧಕ ಹೊಗೆ ಹಾಕುವುದು ಮತ್ತು ಕ್ರಿಮಿನಾಶಕಗಳನ್ನು ಸಿಂಪಡಿಸುವ ಕ್ರಮಗಳು ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಲು ಅವಶ್ಯಕವಾಗಿರುತ್ತದೆ. ಡೆಂಘೀ ಜ್ವರದ ಸೋಂಕು ಉಂಟಾದವರಿಗೆ ಶೀಘ್ರ ಪತ್ತೆ ಮಾಡುವ ರೋಗನಿರ್ಣಯ ಮತ್ತು ಸೂಕ್ತ ವೈದ್ಯಕೀಯ ಆರೈಕೆಗಳು ಮುಖ್ಯವಾಗಿರುತ್ತವೆ. ಉನ್ನತಮಟ್ಟದ ಜ್ವರ, ತೀವ್ರ ತಲೆನೋವು, ಕೀಲು, ಮಾಂಸಖoಡಗಳಲ್ಲಿ ನೋವು, ದದ್ದು ಮತ್ತು ರಕ್ತಸ್ರಾವ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ವೈರಸ್ ನಿರೋಧಕ ಚಿಕಿತ್ಸೆ ಇರುವುದಿಲ್ಲ. ಆದರೆ ಬೆಂಬಲದ ಆರೈಕೆಯಿಂದ ಲಕ್ಷಣಗಳು ಕಡಿಮೆಯಾಗಬಹುದಲ್ಲದೆ, ಸಂಕೀರ್ಣ ತೊಂದರೆಗಳನ್ನು ತಡೆಯಬಹುದು.
ವಿಶ್ರಾಂತಿ ಪಡೆಯುವುದು, ಸೂಕ್ತ ಪ್ರಮಾಣದಲ್ಲಿ ನೀರು ಸೇವಿಸುವುದು, ಜ್ವರ ಮತ್ತು ನೋವು ಪರಿಹಾರಕ್ಕಾಗಿ ಪ್ಯಾರಾಸಿಟಮಾಲ್ ಸೇವಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲು ರೋಗಿಗಳಿಗೆ ಸಲಹೆ ನೀಡಲಾಗುತ್ತಿದೆ. ತೀವ್ರ ಸೋಂಕು ಇರುವ ಪ್ರಕರಣಗಳಲ್ಲಿ ಆಸ್ಪತ್ರೆಗೆ ಸೇರಿಸಬೇಕಾದ ಅಗತ್ಯ ಇರಬಹುದು. ಆಸ್ಪತ್ರೆಗಳಲ್ಲಿ ಇಂಟ್ರಾವೀನಸ್ ದ್ರವಗಳ ನೀಡಿಕೆ ಮತ್ತು ರಕ್ತ ವರ್ಗಾವಣೆ ಕ್ರಮಗಳನ್ನು ಕೈಗೊಳ್ಳಬಹುದು.
ಅಂತಿಮವಾಗಿ ಹೇಳಬೇಕೆಂದರೆ, ಬೆಂಗಳೂರಿನಲ್ಲಿ ಮುಂಗಾರು ಋತುವಿನ ಸಂದರ್ಭದಲ್ಲಿನ ಡೆಂಗ್ಯೂ ಪ್ರಕರಣಗಳ ಹೆಚ್ಚಳವು ಗಂಭೀರವಾದ ಸಾರ್ವಜನಿಕ ಆರೋಗ್ಯ ಕಾಳಜಿಯ ವಿಷಯವಾಗಿದೆ. ಈ ಹೆಚ್ಚಳದ ಹಿಂದಿನ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದರೊಂದಿಗೆ ಪರಿಣಾಮಕಾರಿ ರೋಗ ತಡೆಯುವ ಮತ್ತು ಚಿಕಿತ್ಸೆಯ ಯೋಜನೆಗಳನ್ನು ಅನುಷ್ಟಾನಕ್ಕೆ ತರುವುದರಿಂದ, ಡೆಂಘೀ ಜ್ವರ ಹರಡುವುದನ್ನು ತಡೆಯಬಹುದು. ಇದರೊಂದಿಗೆ ಸಮುದಾಯದ ಆರೋಗ್ಯವನ್ನು ಸಂರಕ್ಷಿಸಬಹುದು.
ಡಾ. ಆದಿತ್ಯಾ ಚೌಟಿ,ನಿರ್ದೇಶಕರು-ಆಂತರಿಕ ವೈದ್ಯಕೀಯ ಮತ್ತು ಮಧುಮೇಹ ಶಾಸ್ತ್ರ,ಟ್ರೈಲೈಫ್ ಹಾಸ್ಪಿಟಲ್.