ಹರಿಯಾಣ: ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲಿದೆ ಬಿಜೆಪಿ
ಚಂಡೀಗಢ: ವಿಧಾನಸಭೆ ಚುನಾವಣೆಗೆ ಬಿಜೆಪಿ ಸಂಪೂರ್ಣ ಸಜ್ಜಾಗಿದ್ದು, ಭಾರಿ ಬಹುಮತದೊಂದಿಗೆ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣಾ ಆಯೋಗವು ಶುಕ್ರವಾರ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೈನಿ, ಚುನಾವಣಾ ಆಯೋಗದ ಘೋಷಣೆಯನ್ನು ಸ್ವಾಗತಿಸಿದ್ದಾರೆ.
‘ಚುನಾವಣೆಗೆ ನಾವು ಸಂಪೂರ್ಣ ಸಿದ್ಧರಾಗಿದ್ದೇವೆ. ಬಿಜೆಪಿಯು ಹರಿಯಾಣದಲ್ಲಿ ಭಾರಿ ಬಹುಮತದೊಂದಿಗೆ ಸತತ ಮೂರನೇ ಸಲ ಸರ್ಕಾರ ರಚಿಸಲಿದೆ’ ಎಂದು ಹೇಳಿದ್ದಾರೆ.‌
ಬಿಜೆಪಿ ಸರ್ಕಾರವು ಯಾವುದೇ ತಾರತಮ್ಯ ತೋರದೆ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಪ್ರತಿಪಾದಿಸಿರುವ ಅವರು, ಕಳೆದ 10 ವರ್ಷಗಳಲ್ಲಿ ಹರಿಯಾಣವು ಪ್ರತಿ ಕ್ಷೇತ್ರದಲ್ಲಿಯೂ ಅಭಿವೃದ್ಧಿಯ ಹೊಸ ಎತ್ತರಕ್ಕೆ ಏರಿದೆ ಎಂದು ಬೆನ್ನುತಟ್ಟಿಕೊಂಡಿದ್ದಾರೆ.
ವಿರೋಧ ಪಕ್ಷ ಕಾಂಗ್ರೆಸ್‌ ವಿರುದ್ಧ ಗುಡುಗಿದ ಮುಖ್ಯಮಂತ್ರಿ, ಆ ಪಕ್ಷವು ಸುಳ್ಳು ಹೇಳುವುದನ್ನು ಬಿಟ್ಟು ಏನು ಮಾಡಿದೆ ಎಂಬ ವಿವರವನ್ನು ಜನರ ಮುಂದಿಡಲಿ ಎಂದು ಸವಾಲೆಸೆದಿದ್ದಾರೆ.
ಕಾಂಗ್ರೆಸ್‌ನ ಸುಳ್ಳುಗಳಿಗೆ ತಕ್ಕ ಪಾಠ ಕಲಿಸುವಂತೆ ಜನರನ್ನು ಕೋರಿರುವ ಅವರು, ಭಾರಿ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆಯೂ ಮನವಿ ಮಾಡಿದ್ದಾರೆ.