ಐಎಂಎ 24 ಗಂಟೆಯ ಮುಷ್ಕರ ಆರಂಭ
ನವದೆಹಲಿ:ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) 24 ತಾಸಿನ ಮುಷ್ಕರ ಹಮ್ಮಿಕೊಂಡಿದೆ.
ವೈದ್ಯರ ಮುಷ್ಕರ ಬೆಳಿಗ್ಗೆ 6 ಗಂಟೆಯಿಂದ ಮುಷ್ಕರ ಆರಂಭಗೊಂಡು. ಭಾನುವಾರ ಬೆಳಿಗ್ಗೆ 6ರವರೆಗೆ ಮುಷ್ಕರ ಮುಂದುವರಿಯಲಿದೆ. 24 ತಾಸು ತುರ್ತು ಸೇವೆ ಹೊರತುಪಡಿಸಿದ ಸೇವೆಗಳನ್ನು ರಾಷ್ಟ್ರದಾದ್ಯಂತ ಸ್ಥಗಿತಗೊಳಿಸುವುದಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ.
ಐಎಂಎ ಕರ್ನಾಟಕ ಶಾಖೆ ನೇತೃತ್ವದಲ್ಲಿ ರಾಜ್ಯದಲ್ಲೂ ಮುಷ್ಕರ ನಡೆಯುತ್ತಿದೆ.
ಅಗತ್ಯ ಸೇವೆ, ತುರ್ತು ಚಿಕಿತ್ಸೆಗಳಿಗೆ ಅಡ್ಡಿಯಾಗುವುದಿಲ್ಲ. ಹೊರ ರೋಗಿ ಸೇವೆಗಳು (ಒಪಿಡಿ) ಲಭ್ಯವಿರುವುದಿಲ್ಲ, ತುರ್ತು ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ಪ್ರತಿಭಟನೆ ಅವಧಿಯಲ್ಲಿ ನಡೆಸುವುದಿಲ್ಲ ಎಂದು ಐಎಂಎ ಸ್ಪಷ್ಟಪಡಿಸಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಡೆಂಘೀ ಮತ್ತು ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಮರಳುವಂತೆ ಕೇಂದ್ರವು ಶನಿವಾರ ಪ್ರತಿಭಟನಾ ನಿರತ ವೈದ್ಯರಿಗೆ ಖಡಕ್ ಸೂಚನೆ ನೀಡಿದೆ.
ಭಾರತೀಯ ವೈದ್ಯಕೀಯ ಸಂಘ ಮತ್ತು ದೆಹಲಿಯ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ನಿವಾಸಿ ವೈದ್ಯರ ಸಂಘಗಳು ವ್ಯಕ್ತಪಡಿಸಿದ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯ ವೃತ್ತಿಪರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ಎಲ್ಲಾ ಕ್ರಮಗಳನ್ನು ಸೂಚಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕೋಲ್ಕತ್ತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಮತ್ತು ನಂತರ ನಡೆದ ದಾಂಧಲೆ ವಿರುದ್ಧ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘ ಆ.17ರ ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ 24 ಗಂಟೆಗಳ ಕಾಲ ದೇಶಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿ ಮುಷ್ಕರ ಕೈಗೊಂಡಿದೆ.