ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕಾದ ಕೋರ್ಟ್​ ಆದೇಶ
ನವದೆಹಲಿ:2008ರ ನವೆಂಬರ್​ 26ರಂದು ಮುಂಬೈನಲ್ಲಿ ನಡೆದಿದ್ದ ಉಗ್ರ ದಾಳಿಗೆ ಸಂಬಂಧಿಸಿ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕಾದ ಕೋರ್ಟ್​ ಆದೇಶಿಸಿದ್ದು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ಎರಡು ದೇಶಗಳ ನಡುವಿನ (ಭಾರತ-ಯುಎಸ್ ಹಸ್ತಾಂತರ) ಒಪ್ಪಂದವು ರಾಣಾ ಹಸ್ತಾಂತರಕ್ಕೆ ಅನುಮತಿ ನೀಡುತ್ತದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ. ಈ ತೀರ್ಪಿನಿಂದ ರಾಣಾ ಹಾಗೂ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗಿದೆ.
ರಾಣಾ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಆಪಾದಿತ ರಾಣಾ ಎಸಗಿದ ಅಪರಾಧ ಅಮೆರಿಕ ಮತ್ತು ಭಾರತದ ನಡುವಿನ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ಒಳಪಟ್ಟಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರಾಣಾ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಭಾರತವು ಸಾಕಷ್ಟು ಸಮರ್ಥ ಪುರಾವೆಗಳನ್ನು ಒದಗಿಸಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ಈ ಹಿಂದೆ ಅನುಮೋದನೆ ನೀಡಿತ್ತು. ಇದರ ವಿರುದ್ಧ ಆತ ಮತ್ತೆ ಕಾನೂನಿನ ಮೊರೆ ಹೋಗಿದ್ದರು. ಇದೀಗ ಅಮೆರಿಕ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಣಾಗೆ ಅವಕಾಶ ನೀಡಲಾಗಿದೆ.