‘ಅತಿಗೆಂಪು’ ಬೆಳಕು ಹಿಡಿದು ಬಳಸಲು ಸಾಧನ ಅಭಿವೃದ್ಧಿ! ಬೆಂಗಳೂರು: ಕಣ್ಣಿಗೆ ಕಾಣದ ಆದರೆ ವಾತಾವರಣದಲ್ಲಿ ವ್ಯಾಪಕವಾಗಿರುವ ಅತಿಗೆಂಪು ಬೆಳಕನ್ನು (ಇನ್ಫ್ರಾರೆಡ್‌) ಪತ್ತೆ ಮಾಡಿ, ಅಗತ್ಯಕ್ಕೆ ತಕ್ಕಂತೆ ನಿಯಂತ್ರಿಸುವ ಮೂಲಕ ಆಪ್ಟಿಕಲ್‌ ಸಂಪರ್ಕ ಸಾಧನಗಳಿಗೆ ಬಳಸ ಬಹುದಾದ ಸಾಧನವನ್ನು ಬೆಂಗಳೂರಿನ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ‘ಸಿಂಗಲ್‌ ಕ್ರಿಸ್ಟಲೈನ್‌ ಸ್ಕ್ಯಾಂಡಿಯಮ್‌ ನೈಟ್ರೈಡ್‌’ ಎಂಬ ಸಾಧನವನ್ನು ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ವಿಜ್ಞಾನಿಗಳುಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಅತಿಗೆಂಪು ಬೆಳಕಿನಿಂದ ಸೌರ ಮತ್ತು ಉಷ್ಣ ವಿದ್ಯುತ್‌ ಉತ್ಪಾದಿಸಬಹುದು ಎಂದು ಸಾಧಿಸಿ ತೋರಿಸಿದ್ದಾರೆ. ವಿದ್ಯುತ್ ಕಾಂತೀಯ ತರಂಗಗಳುನವೀಕರಿಸಬಹುದಾದ ಇಂಧನ ಮೂಲವಾಗಿದೆ. ವಿದ್ಯುತ್‌ ಉತ್ಪಾದನೆ, ದೂರ ಸಂಪರ್ಕ, ಮಿಲಿಟರಿ, ಭದ್ರತಾ ತಂತ್ರಜ್ಞಾನ, ಸೆನ್ಸಾರ್‌ ಮತ್ತು ಆರೋಗ್ಯ ಆರೈಕೆ ಕ್ಷೇತ್ರಗಳಲ್ಲಿಯೂ ಬಳಸಬಹುದು. ವಿದ್ಯುತ್‌ಕಾಂತೀಯ ಅಲೆಗಳನ್ನು ನಮ್ಮ ಅಗತ್ಯಾನುಸಾರ ಮತ್ತು ನಿಖರವಾಗಿ ಬಳಸಲು ಅತ್ಯುನ್ನತ ತಂತ್ರಜ್ಞಾನವನ್ನು ಬಳಸಲಾಗಿದೆ. ಎಲ್ಲ ಬಗೆಯ ವಿದ್ಯುತ್‌ ಕಾಂತೀಯ ಅಲೆಗಳ ಬಳಕೆ ಸಾಧ್ಯವಿಲ್ಲ. ಅತಿಗೆಂಪು ಬೆಳಕು ಪತ್ತೆ ಇನ್ನೂ ಕಷ್ಟ.ಸಿಂಗಲ್‌ ಕ್ರಿಸ್ಟಲೈನ್‌ ಸ್ಕ್ಯಾಂಡಿಯಮ್‌ ನೈಟ್ರೈಡ್‌ ಹೆಚ್ಚು ಕ್ಷಮತೆಯಿಂದ ಅತಿಗೆಂಪು ಬೆಳಕು ಪತ್ತೆಗೆ ನೆರವಾಗುತ್ತದೆ. ಜೆಎನ್‌ಸಿಎಎಸ್‌ಆರ್‌ನ ಸಹಾಯಕ ಪ್ರೊಫೆಸರ್‌ ಡಾ. ಬಿಸ್ವ ಸಹಾ, ಕೆ.ಸಿ.ಮೌರ್ಯ ಮತ್ತು ತಂಡಸ್ಕ್ಯಾಂಡಿಯಮ್‌ ನೈಟ್ರೈಡ್‌ ಅಭಿವೃದ್ಧಿಪಡಿಸಿದೆ. ಈ ಕುರಿತು ಬಿಸ್ವ ಸಹಾ ಅವರು, ‘ಎಲೆಕ್ಟ್ರಾನಿಕ್ಸ್‌ನಿಂದ ಆರೋಗ್ಯ ಕ್ಷೇತ್ರದವರೆಗೆ, ರಕ್ಷಣಾ ಉದ್ದೇಶಗಳಿಂದ ವಿದ್ಯುತ್‌ ತಂತ್ರಜ್ಞಾನದವರೆಗೆ ಅತಿಗೆಂಪು ಬೆಳಕಿನ ಮೂಲಕ್ಕೆ ಭಾರಿ ಬೇಡಿಕೆ ಇದೆ.ಸ್ಕ್ಯಾಂಡಿಯಮ್‌ ನೈಟ್ರೈಡ್‌ ಇನ್ನೂ ಹಲವು ಕ್ಷೇತ್ರಗಳಲ್ಲಿ ಬಳಕೆ ಮಾಡಬಹುದಾಗಿದೆ’ ಎಂದಿದ್ದಾರೆ. ಸಂಶೋಧನೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್‌ ಫಾರ್‌ ನ್ಯಾನೊ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌, ಸಿಡ್ನಿ ವಿಶ್ವವಿದ್ಯಾಲಯಗಳೂ ಭಾಗಿಯಾಗಿವೆ. ಈ ಸಂಶೋಧನೆಯ ಮಾಹಿತಿ ‘ನ್ಯಾನೋ ಲೆಟರ್ಸ್‌ ಜರ್ನಲ್‌’ನಲ್ಲಿ ಪ್ರಕಟವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.