ಟ್ವೀಟ್‌ಗಳಿಗೆ ಪೂರ್ವಭಾವಿಯಾಗಿಯೇ ಬ್ಲಾಕ್‌ ಮಾಡುವುದು ಕಾನೂನಿಗೆ ವಿರೋಧ: ವಕೀಲರು ಬೆಂಗಳೂರು: ‘ಆಕ್ಷೇಪಾರ್ಹ ಟ್ವೀಟ್‌ಗಳನ್ನು ಬ್ಲಾಕ್‌ ಮಾಡಲು ಸಾಧ್ಯವೇ ವಿನಃ, ಇನ್ನೂ ಮಾಡದೇ ಇರುವ ಟ್ವೀಟ್‌ಗಳಿಗೆ ಪೂರ್ವಭಾವಿಯಾಗಿಯೇ ನಿರ್ಬಂಧ ಹೇರಿ ಬ್ಲಾಕ್‌ ಮಾಡುವುದು ಕಾನೂನಿಗೆ ವಿರೋಧ’ ಎಂದು ಟ್ವಿಟರ್‌ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ‘ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ-2000ದ ಕಲಂ 69ಎ ಗೆ ವಿರುದ್ಧವಾಗಿರುವ 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಬೇಕು’ ಎಂಬ ನೋಟಿಸ್‌ಗಳನ್ನು ಪ್ರಶ್ನಿಸಿ ‘ಟ್ವಿಟರ್’ ಕಂಪನಿ ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಮುಂದುವರಿಸಿತು. ವಿಚಾರಣೆ ವೇಳೆ ಟ್ವಿಟರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು, ‘ಯಾರುಟ್ವೀಟ್‌ ಮಾಡಿದ್ದಾರೊ ಅವರಿಗೆ ನೋಟಿಸ್‌ ನೀಡಿಲ್ಲ. ಬದಲಿಗೆ ಕಂಪನಿಗೆ ನೋಟಿಸ್‌ ನೀಡಿರುವುದು ಸರಿಯಲ್ಲ. ಯಾವ ಕಾರಣಕ್ಕಾಗಿ ಬ್ಲಾಕ್‌ ಮಾಡಲಾಗುತ್ತಿದೆ ಎಂಬ ಬಗ್ಗೆಯೂ ಕಾರಣಗಳನ್ನು ತಿಳಿಸಿಲ್ಲ. ಇದು ಭವಿಷ್ಯದ ಮಾಹಿತಿಯನ್ನು ನಿರ್ಬಂಧಿಸುವುದಕ್ಕೆ ಸಮಾನವಾಗಿದೆ’ ಎಂದು ಆಕ್ಷೇಪಿಸಿದರು. ಕೇಂದ್ರ ಸರ್ಕಾರದ ಪರ ಹಾಜರಿದ್ದಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ ಅವರು ತಮ್ಮ ವಾದ ಮಂಡನೆಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನುನವೆಂಬರ್ 16ಕ್ಕೆ ಮುಂದೂಡಿದೆ. ‘ರಾಷ್ಟ್ರೀಯತೆ, ಸಾರ್ವಜನಿಕ ಹಿತದೃಷ್ಟಿ ಕಾಪಾಡುವ, ಗುಂಪು ಘರ್ಷಣೆ ಮತ್ತು ಲಿಂಚಿಂಗ್‌ನಂತಹ (ಗುಂಪು ಹಲ್ಲೆ) ದುಷ್ಕೃತ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೆಲವು ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್‌ಗೆ ಆದೇಶಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ನ್ಯಾಯಪೀಠಕ್ಕೆ ಈ ಹಿಂದಿನ ವಿಚಾರಣೆ ವೇಳೆ ಸ್ಪಷ್ಟಪಡಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.