ಆನ್‌ಲೈನ್ ಸ್ನೇಹಿತ.. ಉಡುಗೊರೆ ಆಮಿಷವೊಡ್ಡಿ ಲಕ್ಷ ಲಕ್ಷ ಕಿತ್ತ! ಗೃಹಿಣಿ ಗೋಳು ನನ್ನ ಪತಿ ಉದ್ಯಮಿ. ನಾನು ಗೃಹಿಣಿ. ಫೇಸ್‌ಬುಕ್‌ನಲ್ಲಿ 2023ರ ಫೆಬ್ರುವರಿಯಲ್ಲಿ ಕೆಲ್ಲಿ ಜಾನ್ಸನ್ ಹೆಸರಿನ ಖಾತೆಯಿಂದ ರಿಕ್ವೆಸ್ಟ್ ಬಂದಿತ್ತು. ‘ಲಂಡನ್‌ ವೈದ್ಯ’ ಎಂಬುದು ‘ಬಯೋ’ದಲ್ಲಿತ್ತು. ವೈದ್ಯನಾಗಿರಬಹುದೆಂದು ತಿಳಿದು ರಿಕ್ವೆಸ್ಟ್ ಸ್ವೀಕರಿಸಿದ್ದೆ. ಇದಾದ ಮರುದಿನವೇ ಆತನಿಂದ, ‘ಹಾಯ್’ ಸಂದೇಶ ಬಂದಿತ್ತು. ಅದಕ್ಕೆ ನಾನೂ ಪ್ರತಿಕ್ರಿಯಿಸಿದ್ದೆ. ‘ನಾನು ಲಂಡನ್‌ನಲ್ಲಿ ವೈದ್ಯನಾಗಿದ್ದೇನೆ. ಭಾರತವೆಂದರೆ ನನಗೆ ಅಚ್ಚುಮೆಚ್ಚು. ನಿಮ್ಮ ಸ್ನೇಹ ಸಿಕ್ಕಿದ್ದಕ್ಕೆ ಖುಷಿಯಾಯಿತು’ ಎಂದಿದ್ದ. ‘ಧನ್ಯವಾದಗಳು’ ಎಂಬುದಾಗಿ ನಾನೂ ಹೇಳಿದ್ದೆ. ಇದಾದ ನಂತರ, ನಮ್ಮಿಬ್ಬರ ಚಾಟಿಂಗ್ ಮುಂದುವರಿಯಿತು. ಪರಸ್ಪರ ಫೋಟೊ ಸಹ ವಿನಿಮಯ ಮಾಡಿಕೊಂಡೆವು. ಆತ, ಆಸ್ಪತ್ರೆಯಲ್ಲಿದ್ದ ಹಾಗೂ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿದ್ದ ಫೋಟೊಗಳನ್ನು ಕಳುಹಿಸಿದ್ದ. ಅವುಗಳನ್ನು ನೋಡಿ, ಆತ ವೈದ್ಯನಾಗಿರಬಹುದೆಂದು ಹೆಚ್ಚು ನಂಬಿದೆ.’ ‘ಇಬ್ಬರಿಗೂ ಪರಿಚಯವಾಗಿ 15 ದಿನವಾಗಿತ್ತು. ಆದರೆ, ಈ ವಿಷಯವನ್ನು ನಾನು ಪತಿಗೆ ಹೇಳಿರಲಿಲ್ಲ. ಇದರ ನಡುವೆಯೇ ಆತ, ‘ನೀನು ನನ್ನ ನೆಚ್ಚಿನ ಸ್ನೇಹಿತೆ. ನಿನಗೆ ಉಡುಗೊರೆ ನೀಡಬೇಕು’ ಎಂದಿದ್ದ. ಜೊತೆಗೆ, ನನ್ನ ಮನೆಯ ವಿಳಾಸವನ್ನು ಪಡೆದುಕೊಂಡಿದ್ದ. ಚಿನ್ನದ ಸರಗಳು, ಕೈ ಗಡಿಯಾರ, ಓಲೆಗಳು, ಬಟ್ಟೆ, ಚಪ್ಪಲಿಗಳು ಹಾಗೂ ಇತರೆ ವಸ್ತುಗಳು ಬಾಕ್ಸ್‌ನಲ್ಲಿದ್ದ ಫೋಟೊವನ್ನು ಆತ ನನಗೆ ಕಳುಹಿಸಿದ್ದ. ‘ಇದೆಲ್ಲವೂ ನಿನಗಾಗಿ. ಸದ್ಯದಲ್ಲೇ ನಿನ್ನ ಮನೆಗೆ’ ಎಂದಿದ್ದ. ಆತನ ಮಾತು ಕೇಳಿ ಖುಷಿಯಾಗಿದ್ದೆ. ಉಡುಗೊರೆಗಾಗಿ ಕಾಯುತ್ತಿದ್ದೆ. ನಾಲ್ಕು ದಿನಗಳ ನಂತರ ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು. ‘ನಿಮ್ಮ ಲಂಡನ್ ಸ್ನೇಹಿತ ಕೆಲ್ಲಿ ಜಾನ್ಸನ್, ಉಡುಗೊರೆ ಬಾಕ್ಸ್ ಕಳುಹಿಸಿದ್ದಾರೆ. ಅದರಲ್ಲಿ ಚಿನ್ನದ ಆಭರಣ ಹಾಗೂ ದುಬಾರಿ ವಸ್ತುಗಳಿವೆ. ಅವುಗಳನ್ನು ನಿಮ್ಮ ವಿಳಾಸಕ್ಕೆ ಕಳುಹಿಸಬೇಕಾದರೆ, ಮೊದಲಿಗೆ ಕಸ್ಟಮ್ಸ್ ಶುಲ್ಕ ಪಾವತಿಸಬೇಕು’ ಎಂದಿದ್ದ. ಅದನ್ನು ನಂಬಿ, ಆತ ಹೇಳಿದ್ದ ಖಾತೆಗೆ ಆರಂಭದಲ್ಲಿ ₹ 25 ಸಾವಿರ ಹಾಕಿದ್ದೆ. ಇದಾದ ಕೆಲ ಗಂಟೆಗಳ ಬಳಿಕ ಕರೆ ಮಾಡಿದ್ದ ಮತ್ತೊಬ್ಬ, ‘ನಿಮ್ಮ ಉಡುಗೊರೆ ಬಾಕ್ಸ್ ಬೆಂಗಳೂರಿಗೆ ಕಳುಹಿಸಲಾಗುವುದು. ಇದಕ್ಕಾಗಿ ಕೋರಿಯರ್ ಹಾಗೂ ಕಸ್ಟಮ್ಸ್ ಶುಲ್ಕ ಪಾವತಿಸಬೇಕು’ ಎಂದಿದ್ದ. ಅದನ್ನೂ ನಂಬಿ, ₹ 25 ಸಾವಿರ ಜಮೆ ಮಾಡಿದ್ದೆ. ಕೆಲ್ಲಿ ಜಾನ್ಸನ್ ಕಳುಹಿಸಿದ್ದ ಬಾಕ್ಸ್ ಫೋಟೊಗಳನ್ನು ಪುನಃ ಕಳುಹಿಸಿದ್ದ ಯುವತಿಯೊಬ್ಬಳು, ‘ನಾನು ಕಸ್ಟಮ್ಸ್ ಅಧಿಕಾರಿ. ನಿಮ್ಮ ಬಾಕ್ಸ್ ತೆರೆದು ನೋಡಲಾಗಿದೆ. ದುಬಾರಿ ಬೆಲೆಯ ಚಿನ್ನಾಭರಣ ಹಾಗೂ ವಸ್ತುಗಳಿವೆ. ನಿಮ್ಮ ಸ್ನೇಹಿತ ಕೆಲ್ಲಿ ಜಾನ್ಸ್ ಯಾವುದೇ ಕಸ್ಟಮ್ಸ್ ಶುಲ್ಕ ಪಾವತಿ ಮಾಡಿಲ್ಲ. ನೀವು ಭಾರತದ ತೆರಿಗೆ ಪಾವತಿ ಮಾಡಬೇಕು. ಅವಾಗಲೇ ಈ ಬಾಕ್ಸ್‌ ನಿಮ್ಮ ಮನೆಗೆ ಕಳುಹಿಸುತ್ತೇವೆ’ ಎಂದಿದ್ದಳು. ಅವಳ ಮಾತು ನಂಬಿ, ಹಂತ ಹಂತವಾಗಿ ₹ 4.80 ಲಕ್ಷ ಕಳುಹಿಸಿದ್ದೆ. ಇದಾದ ನಂತರವೂ ನನಗೆ ಬಾಕ್ಸ್ ಬರಲಿಲ್ಲ. ಅದೇ ಯುವತಿ ಪುನಃ ಕರೆ ಮಾಡಿ, ‘ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಮ್ಮ ಬಾಕ್ಸ್ ಸಿಲುಕಿಕೊಂಡಿದೆ. ಸ್ಥಳೀಯ ಶುಲ್ಕ ಪಾವತಿ ಮಾಡಿದರೆ ಮಾತ್ರ ಬಾಕ್ಸ್ ನಿಮ್ಮ ವಿಳಾಸಕ್ಕೆ ಬರುತ್ತದೆ’ ಎಂದಿದ್ದಳು.’ ‘ಯುವತಿ ಪುನಃ ಹಣ ಕೇಳಿದ್ದರಿಂದ ಅನುಮಾನ ಬಂದಿತ್ತು. ಆಗ ಪತಿಗೆ ವಿಷಯ ತಿಳಿಸಿದ್ದೆ. ಮೊದಲೇ ಹೇಳಬೇಕಿತ್ತೆಂದು ಪತಿ ಬೈದರು. ಆದರೆ, ವಂಚನೆ ಜಾಲದ ಅರಿವು ನನಗಿರಲಿಲ್ಲ. ನಂತರ, ಪತಿ ಜೊತೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದೇನೆ. ಹಣ ಪಡೆದ ನಂತರ, ಕೆಲ್ಲಿ ಜಾನ್ಸನ್ ಎಂಬಾತ ತನ್ನ ಖಾತೆಯನ್ನೇ ಅಳಿಸಿ ಹಾಕಿದ್ದಾನೆ. ಆತ ಯಾರು? ಎಂಬುದು ಇದುವರೆಗೂ ಗೊತ್ತಾಗಿಲ್ಲ. ವಂಚನೆ ಉದ್ದೇಶದಿಂದ ಆತ, ನಕಲಿ ಖಾತೆ ಸೃಷ್ಟಿಸಿದ್ದನೆಂದು ಪೊಲೀಸರು ಹೇಳುತ್ತಿದ್ದಾರೆ’ ‘ಸಮಯ ಕಳೆಯಲು ಸಾಮಾಜಿಕ ಮಾಧ್ಯಮಗಳನ್ನು ನೋಡುತ್ತೇನೆ. ಹೊಸಬರು ಸ್ನೇಹಿತರಾಗುತ್ತಿದ್ದಂತೆ ಹಿಗ್ಗುತ್ತೇವೆ. ಆ ಸ್ನೇಹಿತ ಯಾರು? ನನಗೆ ಏಕೆ ರಿಕ್ವೆಸ್ಟ್ ಕಳುಹಿಸಿದ್ದಾನೆ ? ಆತನ ಉದ್ದೇಶವೇನು ? ದುಬಾರಿ ಉಡುಗೊರೆ ನನಗೆ ಏಕೆ ಕಳುಹಿಸುತ್ತಾನೆ? ಎಂಬ ಬಗ್ಗೆ ಯೋಚಿಸುವುದೇ ಇಲ್ಲ. ಆಮಿಷಗಳಿಗೆ ಒಳಗಾಗಿ ಹಣ ಕಳೆದುಕೊಳ್ಳುತ್ತೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸಬೇಕೆಂದು ಈಗ ಅರಿವಾಗಿದೆ.’ – ನೊಂದ ಮಹಿಳೆ ನಕಲಿ ಖಾತೆ; ಆಮಿಷವೊಡ್ಡಿ ವಂಚಿಸುವ ಜಾಲ ಸಾಮಾಜಿಕ ಮಾಧ್ಯಮಗಳ ನಕಲಿ ಖಾತೆಗಳ ಮೂಲಕ ಪರಿಚಯ ಮಾಡಿಕೊಳ್ಳುವ ವಂಚಕರು, ಸ್ನೇಹ ಬೆಳೆಸುತ್ತಾರೆ. ಉಡುಗೊರೆ ಕಳುಹಿಸುವುದಾಗಿ ಹೇಳುತ್ತಾರೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ವಿಮಾನ ನಿಲ್ದಾಣದಲ್ಲಿರುವ ಉಡುಗೊರೆಯನ್ನು ಮನೆಗೆ ಕಳುಹಿಸುವುದಾಗಿ ಹೇಳಿ ಶುಲ್ಕದ ಹೆಸರಿನಲ್ಲಿ ಲಕ್ಷ ಲಕ್ಷ ಪಡೆದು ನಾಪತ್ತೆಯಾಗುತ್ತಾರೆ. ಇಂಥ ಜಾಲದಲ್ಲಿ ಹೆಚ್ಚಾಗಿ ಯುವತಿಯರು, ಗೃಹಿಣಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧವಾದರೆ ದೂರು ನೀಡಿ: 112 ಅಥವಾ 1930 ಜಾಲತಾಣ: ://../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.