ಮೊಬೈಲ್‌ ತಯಾರಿಕೆಯಲ್ಲಿ ಭಾರತಕ್ಕೆ 2ನೇ ಸ್ಥಾನ! ಬೆಂಗಳೂರು: 2014ರಿಂದ 2022ರ ನಡುವೆ ಮೊಬೈಲ್‌ ಫೋನ್‌ ತಯಾರಿಕೆಯಲ್ಲಿ ಶೇಕಡ 23ರಷ್ಟು ವಾರ್ಷಿಕ ಸಂಯುಕ್ತ ಬೆಳವಣಿಗೆ ದರವನ್ನು (ಸಿಎಜಿಆರ್) ದಾಖಲಿಸಿರುವ ಭಾರತವು, ಈಗ ವಿಶ್ವದಲ್ಲಿ ಎರಡನೆಯ ಅತಿಹೆಚ್ಚು ಸಂಖ್ಯೆಯಲ್ಲಿ ಮೊಬೈಲ್‌ ಫೋನ್‌ಗಳನ್ನು ತಯಾರಿಸುತ್ತಿರುವ ದೇಶವಾಗಿದೆ ಎಂದು ಕೌಂಟರ್‌ಪಾಯಿಂಟ್‌ ರಿಸರ್ಚ್‌ ಸಂಸ್ಥೆ ಹೇಳಿದೆ. ಮೊದಲ ಸ್ಥಾನದಲ್ಲಿ ಚೀನಾ ಇದೆ. 2014ರಲ್ಲಿ ದೇಶಿ ಮಾರುಕಟ್ಟೆಯಲ್ಲಿ ಭಾರತದಲ್ಲಿ ತಯಾರಾದ ಮೊಬೈಲ್‌ ಫೋನ್‌ಗಳ ಪಾಲು ಶೇ 19ರಷ್ಟು ಇತ್ತು. ಇದು ಈಗ ಶೇ 98ಕ್ಕೆ ತಲುಪಿದೆ ಎಂದು ಕೌಂಟರ್‌ಪಾಯಿಂಟ್‌ ವರದಿ ಹೇಳಿದೆ. 2023ರಲ್ಲಿ ಸ್ಥಳೀಯವಾಗಿ ತಯಾರಾದ ಫೋನ್‌ಗಳ ಸಂಖ್ಯೆಯು 27 ಕೋಟಿಗೆ ತಲುಪುವ ಅಂದಾಜು ಇದೆ. ಇದು ಹಿಂದಿನ ವರ್ಷ 25 ಕೋಟಿ ಆಗಿತ್ತು. ಜಗತ್ತಿನಲ್ಲಿ ಮೊಬೈಲ್‌ ಫೋನ್ ತಯಾರಿಕೆಯಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿ ಇದೆ ಎಂದು ಕೇಂದ್ರ ಸರ್ಕಾರ ಕೂಡ ಈಚೆಗೆ ಹೇಳಿತ್ತು. ಈ ವರದಿಯು ಆ ಮಾತಿಗೆ ಇಂಬು ಕೊಡುವಂತೆ ಇದೆ. ಭಾರತದಲ್ಲಿ ಮೊಬೈಲ್‌ಗೆ ಬೇಡಿಕೆ ಹೆಚ್ಚುತ್ತಿರುವುದು, ಡಿಜಿಟಲ್ ಸಾಕ್ಷರತೆ ಹೆಚ್ಚಾಗುತ್ತಿರುವುದು ಮತ್ತು ಸ್ಥಳೀಯವಾಗಿ ತಯಾರಿಕೆ ಹೆಚ್ಚಿಸಲು ಸರ್ಕಾರ ನೀಡುತ್ತಿರುವ ಉತ್ತೇಜನ ಕ್ರಮಗಳು ಭಾರತವು ಎರಡನೆಯ ಸ್ಥಾನಕ್ಕೆ ಬರಲು ಕಾರಣ ಎಂದು ವರದಿ ಹೇಳಿದೆ. ‘ಮೊಬೈಲ್‌ ಫೋನ್ ಹಾಗೂ ಅದರ ಬಿಡಿಭಾಗಗಳ ತಯಾರಿಕೆಗೆ ಹಲವು ಕಂಪನಿಗಳು ದೇಶದಲ್ಲಿ ಘಟಕ ಆರಂಭಿಸುತ್ತಿವೆ. ಇದರಿಂದಾಗಿ ಹೂಡಿಕೆ ಹೆಚ್ಚುತ್ತಿದೆ, ಉದ್ಯೋಗಸೃಷ್ಟಿ ಆಗುತ್ತಿದೆ’ ಎಂದು ಕೌಂಟರ್‌ಪಾಯಿಂಟ್‌ ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.