15 | ಐಫೋನ್‌ 15ಗೆ ಉತ್ತಮ ಸ್ಪಂದನೆ ನವದೆಹಲಿ: ಆ್ಯಪಲ್‌ ಕಂಪನಿಯು ಐಫೋನ್‌ 15 ಮತ್ತು 15 ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಮಾರಾಟವು ಭಾರತದಲ್ಲಿ ಶುಕ್ರವಾರದಿಂದ ಆರಂಭ ಆಗಿದೆ. ಉದ್ಯಮದ ಮೂಲಗಳ ಅಂದಾಜಿನ ಪ್ರಕಾರ, ಐಫೋನ್‌ 14 ಸರಣಿಯ ಫೋನ್‌ಗಳ ಮೊದಲ ದಿನದ ಮಾರಾಟಕ್ಕೆ ಹೋಲಿಸಿದರೆ ಐಫೋನ್‌ 15 ಸರಣಿಯ ಫೋನ್‌ಗಳ ಮಾರಾಟದಲ್ಲಿ ಶೇ 100ರಷ್ಟು ಪ್ರಗತಿ ಕಂಡುಬಂದಿದೆ. ಫೋನ್‌ ಖರೀದಿಗೆ ಎಲ್ಲೆಡೆಯೂ ಉದ್ದದ ಸಾಲು ಸಾಮಾನ್ಯವಾಗಿತ್ತು. ಜನರು ತಮ್ಮ ಕಚೇರಿ ಕೆಲಸದ ಅವಧಿಯ ಮುಗಿಸಿ ಫೋನ್‌ ಖರೀದಿಸಲು ಮಳಿಗೆಗಳ ಎದುರು ಜಮಾಯಿಸಿದ್ದರು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಉದ್ಯಮದ ಮೂಲವೊಂದು ತಿಳಿಸಿದೆ. ಈ ಕುರಿತು ಆ್ಯಪಲ್‌ ಕಂಪನಿಗೆ ಕಳುಹಿಸಿದ ಇ–ಮೇಲ್‌ಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಭಾರತದಲ್ಲಿ ತಯಾರಾಗಿರುವ ಐಫೋನ್‌ 15 ಬೆಲೆ ₹79,900ರಿಂದ ಮತ್ತು 6 ಐಫೋನ್‌ 15 ಪ್ಲಸ್‌ ಬೆಲೆಯು ₹89,900 ರಿಂದ ಆರಂಭ ಆಗುತ್ತದೆ. ಐಫೋನ್‌ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ಪೋನ್‌ಗಳ ಬೆಲೆ ಕ್ರಮವಾಗಿ ₹1,34,900 ಮತ್ತು ₹1,59,900 ರಿಂದ ಆರಂಭ ಆಗುತ್ತದೆ. 1ಟಿಬಿ ಸ್ಟೊರೇಜ್‌ ಸಾಮರ್ಥ್ಯದ ಐಫೊನ್‌ 15 ಪ್ರೊ ಮ್ಯಾಕ್ಸ್‌ ಬೆಲೆಯು ಭಾರತದಲ್ಲಿ ₹1.99 ಲಕ್ಷ ಇದೆ. ಐಪೋನ್‌ 15: ಜಿಯೊ ಕೊಡುಗೆ ಬೆಂಗಳೂರು: ಆ್ಯಪಲ್‌ ಕಂಪನಿಯ ಐಪೋನ್‌ 15 ಖರೀದಿಸಿದರೆ ₹2394 ಮೌಲ್ಯದ ಆರು ತಿಂಗಳ ಉಚಿತ ಪ್ಲಾನ್‌ ಸಿಗಲಿದೆ ಎಂದು ರಿಲಯನ್ಸ್‌ ಜಿಯೊ ಕಂಪನಿಯು ಶುಕ್ರವಾರ ತಿಳಿಸಿದೆ. ಈ ಕೊಡುಗೆಯು ಶುಕ್ರವಾರದಿಂದ ಆರಂಭ ಆಗಿದ್ದು ಐಫೋನ್‌ 15 ಖರೀದಿಸುವವರಿಗೆ ಪ್ರತಿ ತಿಂಗಳಿಗೆ ₹399ರಂತೆ ಒಟ್ಟು ಆರು ತಿಂಗಳ ರಿಚಾರ್ಜ್‌ ಪ್ಲಾನ್‌ ಉಚಿತವಾಗಿ ಸಿಗಲಿದೆ. ₹399 ಪ್ಲಾನ್‌ನಲ್ಲಿ ಪ್ರತಿನಿತ್ಯ 3 ಜಿಬಿ ಹೈಸ್ಪೀಡ್‌ ಡೇಟಾ ಅನಿಯಮಿತ ಕರೆ ಮತ್ತು ಪ್ರತಿನಿತ್ಯ 100 ಎಸ್‌ಎಂಎಸ್‌ ಸಿಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ರಿಲಯನ್ಸ್‌ ರಿಟೇಲ್‌ ಸ್ಟೋರ್‌ಗಳು ರಿಲಯನ್ಸ್‌ ಡಿಜಿಟಲ್‌ ಆನ್‌ಲೈನ್ ಅಥವಾ ಜಿಯೊಮಾರ್ಟ್‌ನಲ್ಲಿ ಖರೀದಿಸಿದರೆ ಮಾತ್ರವೇ ಈ ಕೊಡುಗೆ ಸಿಗಲಿದೆ ಎಂದು ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.