ಕ್ಷುದ್ರಗ್ರಹ ಪರಿಣಾಮ ಪತ್ತೆಗೆ ಕಾರ್ಯಾಚರಣೆ ‌ವಾಷಿಂಗ್ಟನ್‌ (ಪಿಟಿಐ):ಕ್ಷುದ್ರಗ್ರಹಗಳಿಂದ ಭೂಮಿಯ ಮೇಲಾಗುವ ಪರಿಣಾಮಗಳ ಅಧ್ಯಯನ ನಡೆಸುವ ಉದ್ದೇಶದಿಂದ ಅಣಕು ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಜೊತೆಗೂಡಿ ನಾಸಾ ಈ ಕಾರ್ಯಾಚರಣೆ ನಡೆಸಲಿದೆ. ಭವಿಷ್ಯದಲ್ಲಿ ಸಂಭವಿಸುವ ವಿಕೋಪಗಳು ಮತ್ತು ಇಂತಹ ಸಂಭವನೀಯ ಅಪಾಯಗಳಿಂದ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಅಧ್ಯಯನ ನಡೆಸಲು ಈ ಕಾರ್ಯಾಚರಣೆಯಿಂದ ಅನುಕೂಲವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯ ಹತ್ತಿರದಲ್ಲಿರುವ ಆಕಾಶಕಾಯಗಳಾದ ಕ್ಷುದ್ರಗ್ರಹ ಅಥವಾ ಧೂಮಕೇತುಗಳಿಂದ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಈ ಕಾರ್ಯಾಚರಣೆ ಬೆಳಕು ಚೆಲ್ಲಲಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸುವ ವೇಳೆ ತೆಗೆದುಕೊಳ್ಳಬೇಕಾದ ಕ್ರಮ ಗಳನ್ನು ಆಧಾರವಾಗಿಟ್ಟುಕೊಂಡು ಈ ಕಾರ್ಯಾಚರಣೆ ರೂಪು–ರೇಷೆಗಳನ್ನು ರೂಪಿಸಲಾಗಿದೆ ಎಂದು ನಾಸಾ ಹೇಳಿದೆ. ಈ ನಿಟ್ಟಿನಲ್ಲಿ, ನಾಸಾವು ಮುಂದಿನ ವಾರ ‘ಗ್ರಹಗಳ ರಕ್ಷಣಾ ಸಮಾವೇಶ–2019’ ಆಯೋಜಿಸಲಿದೆ. ವಿಶ್ವದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ಕಾರ್ಯಾಚರಣೆಯ ಸ್ವರೂಪದ ಬಗ್ಗೆ ಚರ್ಚೆ ನಡೆಸಲಿವೆ. ‘ವಿಶ್ವದ ಬಾಹ್ಯಾಕಾಶ ಸಂಸ್ಥೆಗಳ ನಡುವೆ ಪರಿಣಾಮಕಾರಿ ಸಂವಹನ ನಡೆಸಲು ಈ ಸಮಾವೇಶ ವೇದಿಕೆಯಾಗಲಿದ್ದು, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತೆಗೆದುಕೊಳ್ಳುವ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.