ಪ್ರತಿಭೆಯ ಬೆಳಕಿಗೆವಿವೇಕದ ತೈಲ ಅವರು ಡಾ. ಮಹದೇವಸ್ವಾಮಿ. ಎಚ್‌.ಡಿ.ಕೋಟೆಯ ಹಂಪಾಪುರದವರು. ಬಾಲ್ಯದಿಂದಲೂ ರ‍್ಯಾಂಕ್‌ ವಿದ್ಯಾರ್ಥಿ. ಆದರೆ, ಮನೆಯಲ್ಲಿ ಕಿತ್ತುತಿನ್ನುವ ಬಡತನ. ಪೋಷಕರು ಅನಕ್ಷರಸ್ಥರು. ಮೈಸೂರಿಗೆ ಬಂದು ವಾರನ್ನ ಮಾಡಿಕೊಂಡು, ಗಾರೆ ಕೆಲಸ ಮಾಡಿಕೊಂಡು ಓದಿದವರು. ಸಾಧನೆಯ ಛಲ ಬಿಡದೇ ಎಂಬಿಬಿಎಸ್ ಮುಗಿಸಿದರು. ಕೊನೆಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಅಧಿಕಾರಿಯೂ ಆದರು. ‘ಓದಲು ಪ್ರತಿಭೆಯೊಂದಿದ್ದರೆ ಎಲ್ಲಿ ಸಾ‍ಲುತ್ತದೆ. ಬೆನ್ನಹಿಂದೆ ನಿಂತು ಪ್ರೋತ್ಸಾಹಿಸು ವವರು ಬೇಕು. ಕಾಲೇಜುಗಳ ದುಬಾರಿ ಶುಲ್ಕ ಭರಿಸಬೇಕು. ನುರಿತ ಶಿಕ್ಷಕರಿಂದ ಪಾಠ ಕಲಿಯಬೇಕು. ಇದು ನನಗೆ ಸಾಧ್ಯವಾಗಿದ್ದು ‘ವಿವೇಕ ಸ್ಕಾಲರ್‌ಶಿಪ್‌ ಪ್ರೋಗ್ರಾಂ’ ಮೂಲಕ. ಇಲ್ಲವಾದಲ್ಲಿ ಬಡವನಾಗಿದ್ದ ನನಗೆ ಈ ಸಾಧನೆ ಬಲು ಕಷ್ಟವಾಗುತ್ತಿತ್ತು’. ಹೀಗೆ ಹೇಳಿ, ಕಣ್ಣಂಚಲ್ಲಿ ನೀರು ತುಂಬಿಕೊಂಡ ಮಹದೇವಸ್ವಾಮಿ ಮುಖದಲ್ಲಿ ಸಾಧನೆಯ ಕಾಂತಿಯೂ ಇತ್ತು. ಬಡತನದ ನಡುವೆ ವಿಜ್ಞಾನ ವಿಷಯಗಳನ್ನು ಕಲಿಯಲು ಆಸಕ್ತಿ ತೋರುವ ಪ್ರತಿಭಾವಂತರಿಗೆ, ಆರ್ಥಿಕ ಬೆಂಬಲದ ಜತೆಗೆ ಪ್ರೋತ್ಸಾಹವೂ ಇರಬೇಕು. ಅಂಥ ವಿದ್ಯಾರ್ಥಿಗಳಿಗೆ ಎರಡೂ ರೀತಿಯಲ್ಲೂ ಪ್ರೋತ್ಸಾಹಿಸುತ್ತಿರುವ ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್(ಎಸ್‌ವಿವೈಎಂ), ‘ವಿವೇಕ ಸ್ಕಾಲರ್‌ಶಿಪ್‌ ಪ್ರೋಗ್ರಾಂ’ ಮೂಲಕ ಹಲವು ಪ್ರತಿಭಾವಂತರನ್ನು ಪೋಷಿಸಿದೆ. ಡಾ. ಮಹದೇವಸ್ವಾಮಿ, ಸಂಗೀತ, ಶಿವು ಆಂಡಿಯಾ, ಮಣಿಕಂಠಸ್ವಾಮಿ ಸೇರಿದಂತೆ ನೂರಾರು ಮಂದಿ ಇದೇ ಕಾರ್ಯಕ್ರಮದ ನೆರವಿನೊಂದಿಗೆ ವಿಜ್ಞಾನ ಪದವಿ ಮುಗಿಸಿ, ಉತ್ತಮ ಕೆಲಸದಲ್ಲೂ ಇದ್ದಾರೆ. ಹನ್ನೆರಡು ವರ್ಷಗಳ ಹಿಂದೆ.. ‘ವಿವೇಕ ಸ್ಕಾಲರ್‌ಶಿಪ್‌ ಪ್ರೋಗ್ರಾಂ (ವಿಎಸ್‌ಪಿ)’ ಶುರುವಾಗಿದ್ದು 2006ರಲ್ಲಿ. ಇದು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥಾಪಕ ಡಾ.ಆರ್‌.ಬಾಲಸುಬ್ರಹ್ಮಣ್ಯಂ ಕನಸಿನ ಕಾರ್ಯಕ್ರಮ. ಪ್ರತಿಭೆಯಿದ್ದರೂ, ಬಡತನದ ಕಾರಣಕ್ಕೆ ಓದಿನಿಂದ ವಂಚಿತರಾಗುವ ಯುವಕರನ್ನು ಗುರುತಿಸಿ, ಅವರಿಗೆ ನೆರವಾಗಲು ನಿರ್ಧರಿಸಿದರು ಬಾಲಸುಬ್ರಹ್ಮಣ್ಯಂ. ಮೊದಲು ಟೀ ಅಂಗಡಿ ಹುಡುಗ, ಮತ್ತೊಬ್ಬಳು ಹಳ್ಳಿಯಲ್ಲಿದ್ದ ಬಾಲಕಿಗೆ ಸಹಾಯಹಸ್ತ ನೀಡುವ ಮೂಲಕ, ಒಬ್ಬೊಬ್ಬರಿಗೇ ಆರ್ಥಿಕ ನೆರವು, ಪ್ರೋತ್ಸಾಹ ನೀಡುತ್ತಿದ್ದರು. ಮುಂದೆ ಈ ಪ್ರಕ್ರಿಯೆಯೇ ‘ವಿಎಸ್‌ಪಿ’ ಸ್ಥಾಪನೆಗೆ ಕಾರಣವಾಯಿತು. ಎಸ್‌ವಿವೈಎಂ ಸಂಸ್ಥೆಗೆ ನೀಡುವ ದೇಣಿಗೆಯ ಮೂಲಕ ಈ ಸ್ಕಾಲರ್‌ಶಿಪ್‌ ಪ್ರೋಗ್ರಾಂ ಮುನ್ನಡೆಯುತ್ತಿದೆ. ವಿಎಸ್‌ಪಿ, ಬಡ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಯಲು ಧರ್ಮಛತ್ರವಿದ್ದಂತೆ. ಎಸ್ಸೆಸ್ಸೆಲ್ಸಿ ಬಳಿಕ ವಿಜ್ಞಾನ ಕ್ಷೇತ್ರದಲ್ಲಿ ಪಿಯು, ಪದವಿ ಮಾಡಬೇಕೆಂಬ ಆಸೆ ಹೊಂದಿರುವವರನ್ನು ಗುರುತಿಸಿ, ಅವರಿಗೆ ಕಾಲೇಜು ಸೇರಲು ಬೋಧನಾ ಶುಲ್ಕ ನೀಡಿ, ಬೋಧಕರನ್ನು ನೀಡಿ, ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳುತ್ತಾರೆ. ಈ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಅವಲೋಕಿಸಿ ಭವಿಷ್ಯದ ಸಾಧನೆ ಮೆಟ್ಟಿಲು ಏರಲು ನಿಗಾವಹಿಸುತ್ತಾರೆ. ಒನ್‌ ಟು ಒನ್‌ ಪಾಠ ಸಾಮಾನ್ಯವಾಗಿ ಸ್ಕಾಲರ್‌ಶಿಪ್‌ ಪ್ರೋಗ್ರಾಂಗಳಲ್ಲಿ ಶುಲ್ಕ ಪಾವತಿಸಿ ವಿಮುಖರಾಗುವವರೇ ಹೆಚ್ಚು. ಆದರೆ, ಇದು ಶುಲ್ಕವನ್ನು ಮೀರಿದ ಕಾರ್ಯಕ್ರಮ. ಇದು ವಿದ್ಯಾರ್ಥಿಯ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಪಣತೊಟ್ಟ ಯೋಗ. ಹಾಗಾಗಿ, ಇದರ ಸ್ವರೂಪ ವಿಭಿನ್ನವಾಗಿದೆ. ಇಲ್ಲಿ ಸಾಮೂಹಿಕ ಕಲಿಕಾ ವಿಧಾನವನ್ನು ಅಳವಡಿಸಿಕೊಂಡಿಲ್ಲ. ಗುಂಪಿನಲ್ಲಿ ಪಾಠ ಮಾಡಿದರೆ ಅದು ಪರಿಣಾಮಕಾರಿಯಲ್ಲ ಎನ್ನುವುದು ‘ವಿಎಸ್‌ಪಿ’ಯ ನಂಬಿಕೆ. ಹಾಗಾಗಿಯೇ, ಇಲ್ಲಿ ‘ಒಬ್ಬ ವಿದ್ಯಾರ್ಥಿಗೆ ಒಬ್ಬರು ಬೋಧಕರು’ ಎನ್ನುವ ಮಂತ್ರ ಅಳವಡಿಸಿ ಕೊಳ್ಳಲಾಗಿದೆ. ವಿದ್ಯಾರ್ಥಿ– ಶಿಕ್ಷಕರ ನಡುವೆ ನಿಕಟ ಸಂಪರ್ಕ ಇರುವ ಕಾರಣ, ವಿದ್ಯಾರ್ಥಿಯು ತನ್ನೆಲ್ಲ ಶೈಕ್ಷಣಿಕ ಗೊಂದಲಗಳನ್ನು ಗುರುವಿನೊಂದಿಗೆ ಕೇಳಿ ಕಲಿತುಕೊಳ್ಳಲು ಅವಕಾಶ ಸಿಗುತ್ತದೆ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ವಿದ್ಯಾರ್ಥಿ, ಶಿಕ್ಷಕರು ಹಾಗೂ ಪೋಷಕರು ತ್ರಿಭುಜಾಕೃತಿಯಲ್ಲಿ (ಟ್ರೈಯಾಂಗುಲರ್) ಇಲ್ಲಿ ಕಾರ್ಯನಿ ರ್ವಹಿಸುತ್ತಾರೆ. ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಗಮನಿಸುವ ಶಿಕ್ಷಕರು, ಪೋಷಕರೊಂದಿಗೆ ಸಂಪರ್ಕ ಹೊಂದಿರುತ್ತಾರೆ. ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಪೋಷಕರಿಗೆ ಕಾಲ ಕಾಲಕ್ಕೆ ತಿಳಿಸಲಾಗುತ್ತಿರುತ್ತದೆ. ಪೋಷಕರಿಗೆ ಪೋಸ್ಟ್‌ ಕಾರ್ಡ್‌ ಮೂಲಕ ಮಾಹಿತಿ ಕಳುಹಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ದೂರವಾಣಿ ಕರೆ ಮಾಡಿ ಮಾತನಾಡುತ್ತಾರೆ. ಅವಶ್ಯಕತೆ ಇದ್ದರೆ ಮನೆಗೆ ಭೇಟಿ ನೀಡುತ್ತಾರೆ. ‘ಕಲಿಕೆ ಆತ್ಮೀಯವಾಗಿರಬೇಕು. ಯಾಂತ್ರಿಕವಾಗಿದ್ದಲ್ಲಿ ಸಾಧನೆ ಅಸಾಧ್ಯ. ಹಾಗಾಗಿ, ವಿವೇಕ ಸ್ಕಾಲರ್‌ಶಿಪ್‌ ಪ್ರೋಗ್ರಾಂನಲ್ಲಿ ಶೈಕ್ಷಣಿಕ ಕಾರ್ಯಕ್ರಮವನ್ನು ನಮ್ಮ ಮನೆಯ ಕೆಲಸದಂತೆ ಮಾಡುತ್ತೇವೆ’ ಎನ್ನುತ್ತಾರೆ ಕಾರ್ಯಕ್ರಮದ ಸಹಾಯಕ ನಿರ್ದೇಶಕಿ ಫಾತಿಮಾ ಮೇರಿ. ಜತೆಗೆ, ವಿಶೇಷ ಕಲಿಕೆಯನ್ನು ನೀಡುವ ಉದ್ದೇಶದಿಂದ ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಲಿಕಾ ವಿಧಾನಗಳು ವಿದ್ಯಾರ್ಥಿಯನ್ನು ಗುರುತಿಸಲು ‘ಪ್ರತಿಭೆ ಹಾಗೂ ಆರ್ಥಿಕ ಹಿನ್ನೆಲೆ’ ಎರಡು ಮಾನದಂಡಗಳನ್ನು ಇಟ್ಟುಕೊಂಡಿದ್ದಾರೆ. ಬಡ– ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶ ಸಿಗಬೇಕು. ಅದಕ್ಕಾಗಿ ಮುಕ್ತ ಕಲಿಕೆ ( ) ಹಾಗೂ ಅಂತರ್ಗತ () ಎಂಬ ಎರಡು ವಿಧಾನಗಳಲ್ಲಿ ಕಲಿಸುತ್ತಾರೆ. ಮುಕ್ತ ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಬೋಧಕರನ್ನು ನಿಯೋಜಿಸಿ, ವಿಶೇಷ ಉಪನ್ಯಾಸ, ಎನ್‌ಇಇಟಿ ಹಾಗೂ ಸಿಇಟಿ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ಮಾಡಲಾಗುತ್ತದೆ. ಅಂತರ್ಗತ ಕಲಿಕೆ ವಿಧಾನದಲ್ಲಿ ಕಾಲೇಜುಗಳನ್ನು ಗುರುತಿಸಿ, ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರ ಶೈಕ್ಷಣಿಕ ಪ್ರಗತಿಗೆ ನೆರವು ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಆಯ್ಕೆಗಾಗಿ ಸರಳ ಪರೀಕ್ಷೆ ನಡೆಸಲಾಗುತ್ತದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 50 ಹಾಗೂ ಪರೀಕ್ಷೆಯಲ್ಲಿ ಶೇ 50 ಅಂಕ ಕ್ರೋಡೀಕರಿಸಿ ಅಂತಿಮವಾಗಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ‘ಹಾಲಿ ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಮೀಸಲಾಗಿದೆ. ಪದವಿ ಮುಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಮಾಡುವ ಆಸೆಯಿದ್ದಲ್ಲಿ ಅದನ್ನೂ ಪೂರೈಸಲು ವಿಎಸ್‌ಪಿ ಬದ್ಧವಾಗಿದೆ’ ಎಂದು ಉನ್ನತ ಶಿಕ್ಷಣದ ಹೊಣೆ ಹೊತ್ತಿರುವ ಲಕ್ಷ್ಮಿ ಮೆನನ್ ಹೇಳುತ್ತಾರೆ. ‘ವಿಎಸ್‌ಪಿ’ಗೆ ರಾಜ್ಯದಲ್ಲಿ 5 ಕೇಂದ್ರಗಳಿದ್ದು, ಕಲಿಕೆಯಲ್ಲಿ ತೊಡಗಿಕೊಂಡಿವೆ. ಉತ್ತರ ಕರ್ನಾಟಕದ ಕಾರ್ಯಕ್ರಮಗಳ ಸಂಪೂರ್ಣ ಹೊಣೆ ಗಾರಿಕೆಯನ್ನು ಧಾರವಾಡದಲ್ಲಿರುವ ಕೆ.ಎಸ್‌.ಜಯಂತ್‌ ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಲಕ್ಷ್ಮಿ ಮೆನನ್ ನೋಡಿಕೊಳ್ಳುತ್ತಿದ್ದಾರೆ. ಫಾತಿಮಾ ಮೇರಿ ಕಾರ್ಯಕ್ರಮದ ಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಬೆಂಗಳೂರು, ಮೈಸೂರು, ನಂಜನಗೂಡು, ಹಾಸನ, ಧಾರವಾಡಗಳಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ‘ವಿಎಸ್‌ಪಿ’ ಹುಟ್ಟಿದ ಕತೆ... ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ಸಂಸ್ಥಾಪಕರಾದ ಡಾ.ಆರ್‌.ಬಾಲಸುಬ್ರಹ್ಮಣ್ಯಂ ಅವರು ಒಂದು ದಿನ ಬೆಂಗಳೂರಿನ ಹೋಟೆಲೊಂದಕ್ಕೆ ಟೀ ಕುಡಿಯಲು ಹೋಗಿದ್ದರು. ಆಗ 10–12 ವರ್ಷದ ಬಾಲಕನೊಬ್ಬ ಟೀ ತಂದುಕೊಟ್ಟನು. ಬಾಲು ಅವರಿಗೆ ಮನ ಕಲಕಿತು. ಬಾಲಕನನ್ನು ಮಾತಿಗೆ ಎಳೆದರು. ‘ಏಕಪ್ಪಾ ನೀನು ಹೋಟೆಲಲ್ಲಿ ಕೆಲಸ ಮಾಡುತ್ತಿದ್ದೀಯೆ?’ ಎಂದು ಕೇಳಿದರು. ‘ಮನೆಯಲ್ಲಿ ನಾಲ್ಕು ತಮ್ಮಂದಿರಿದ್ದಾರೆ. ಅಪ್ಪ ಇಲ್ಲ. ನಾನೇ ದೊಡ್ಡವ. ಕೆಲಸ ಮಾಡಿಯೇ ಮನೆ ನಿಭಾಯಿಸಬೇಕು’ ಎಂದ. ಇದನ್ನು ಕೇಳಿಸಿಕೊಂಡ ಬಾಲು ಅವರಿಗೆ ಕಣ್ಣಂಚಲ್ಲಿ ನೀರು ಮೂಡಿತು. ಅವನನ್ನು ಓದಿಸಲು ಶುರು ಮಾಡಿದರು. ಈಗ ಆ ಬಾಲಕ ಎಂಜಿನಿಯರ್‌ ಪದವಿ ಮುಗಿಸಿ ಬೆಂಗಳೂರಿನ ಐಟಿ ಕಂ‍ಪನಿಯೊಂದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಚ್‌.ಡಿ.ಕೋಟೆಯಲ್ಲಿ ಪ್ರತಿಭಾವಂತ ಬಾಲಕಿಯೊಬ್ಬಳನ್ನು ಅವಳ ತಂದೆ ಓದಿಸಲು ಮುಂದಾಗಲಿಲ್ಲ. ಹೆಣ್ಣುಮಕ್ಕಳು ಓದಬಾರದು ಎನ್ನುವುದು ಅವಳ ತಂದೆಯ ವಾದ. ಜತೆಗೆ, ಕಿತ್ತು ತಿನ್ನುವ ಬಡತನ ಬೇರೆ. ಕೊನೆಗೆ ಆ ವಿದ್ಯಾರ್ಥಿನಿಗೂ ಓದಿಸಲು ಶುರು ಮಾಡಲಾಯಿತು. ಈಗ ಆಕೆ ಹಾಸನದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ‘ಹೀಗೆ ಸಣ್ಣದಾಗಿ ಶುರುವಾದ ವಿಎಸ್‌ಪಿ ಈಗ ಹಿರಿದಾಗಿದೆ. ಅಂದಾಜು ಸಾವಿರ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ನಾವು ಸ್ಕಾಲರ್‌ಶಿಪ್‌ ಅನ್ನು ಒಂದು ಕೋರ್ಸಿಗೆ ಮಾತ್ರ ನೀಡುವುದಿಲ್ಲ. ವಿದ್ಯಾರ್ಥಿ ತನಗೆ ಓದಲು ಇಷ್ಟವಿರುವವರೆಗೂ ನಾವು ಓದಿಸುತ್ತೇವೆ’ ಎನ್ನುತ್ತಾರೆ ಬಾಲಸುಬ್ರಹ್ಮಣ್ಯಂ. ‘ಆರ್ಥಿಕವಾಗಿ ಅಶಕ್ತವಾಗಿರುವ ಕುಟುಂಬವನ್ನು ಗಟ್ಟಿಗೊಳಿಸಲು ಶಿಕ್ಷಣವೇ ಮಂತ್ರ. ಅದೇ ನಮ್ಮ ಆಶಯ. ಇದು ಮಾನವ ಬಂಡವಾಳ ಕಟ್ಟುವ ವಿಧಾನ. ವಿದ್ಯಾರ್ಥಿಗಳಿಗೆ ಓದಲು ಶುಲ್ಕ ಭರಿಸಿ, ಹಾಸ್ಟೆಲ್‌ ಸೌಲಭ್ಯವನ್ನೂ ಕೊಟ್ಟು ಭವಿಷ್ಯ ಕಟ್ಟಿಕೊಡಲು ಅಳಿಲುಸೇವೆ ಸಲ್ಲಿಸುತ್ತಿದ್ದೇವೆ’ ಎಂದು ವಿನಯದಿಂದ ಅವರು ಹೇಳುತ್ತಾರೆ. ಸದ್ಯಕ್ಕೆ ವಿಜ್ಞಾನ ಕೋರ್ಸುಗಳಿಗೆ ಈ ಕಾರ್ಯಕ್ರಮ ಮೀಸಲಿದೆ. ವಾಣಿಜ್ಯ ಕೋರ್ಸುಗಳಿಗೂ ವಿಸ್ತರಿಸುವ ಚಿಂತನೆ ನಡೆದಿದೆ. ಸಂಪರ್ಕಕ್ಕೆ: ಬೆಂಗಳೂರು - ಲಕ್ಷ್ಮಿ ಮೆನನ್ - 9731848586, ಧಾರವಾಡ- ಕೆ.ಎಸ್.ಜಯಂತ್- 9686631091, ಮೈಸೂರು- ಸವಿತಾ- 7760446914 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.