ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಿದ ನಾಸಾ: ಏನಿದರ ಉದ್ದೇಶ? ಲಾರೆಲ್ (ಅಮೆರಿಕ): ಕ್ಷುದ್ರಗ್ರಹ ಅಥವಾ ಧೂಮಕೇತುಗಳಿಂದ ಎದುರಾಗುವ ಸಂಭಾವ್ಯ ಅಪಾಯಗಳ ವಿರುದ್ಧ ಭೂಮಿಯನ್ನು ರಕ್ಷಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವ ವಿಶ್ವದ ಮೊದಲ ಕಾರ್ಯಾಚರಣೆಯನ್ನು ನಾಸಾ ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಾಸದ ಬಾಹ್ಯಾಕಾಶ ನೌಕೆ ‘ಡಾರ್ಟ್‌ ( ಡಬಲ್‌ ಅಸ್ಟ್ರಾಯ್ಡ್‌ ರೀಡೈರೆಕ್ಷನ್‌ ಟೆಸ್ಟ್‌ – ಕ್ಷುದ್ರಗ್ರಹದ ಪಥ ಬದಲಿಸುವ ಪರೀಕ್ಷೆ)’ ಕ್ಷುದ್ರಗ್ರಹ ‘ಡಿಮೊರ್ಫಾಸ್’ಗೆ ಹೈಪರ್‌ ಸಾನಿಕ್‌ ವೇಗದಲ್ಲಿ ಡಿಕ್ಕಿ ಹೊಡೆದಿದೆ. 530 ಅಡಿ ಅಗಲದ ಕ್ಷುದ್ರಗ್ರಹದ ಪಥ ಬದಲಿಸುವ ಸಲುವಾಗಿ ಅದರ ಮೇಲೆ ಬಾಹ್ಯಾಕಾಶ ನೌಕೆಯು ಡಿಕ್ಕಿ ಹೊಡೆಯಿತು. ಭೂಮಿಯಿಂದ 7 ದಶಲಕ್ಷ ಮೈಲುಗಳ (11 ದಶಲಕ್ಷ ಕಿಲೋಮೀಟರ್) ದೂರದಲ್ಲಿ ಈ ವಿದ್ಯಮಾನ ನಡೆದಿದೆ. ಈ ಪರೀಕ್ಷೆಗಾಗಿ ‘ಡಾರ್ಟ್‌’ ಅನ್ನು ಹತ್ತು ತಿಂಗಳ ಹಿಂದೆ ನಭಕ್ಕೆ ಉಡಾಯಿಸಲಾಗಿತ್ತು. ಚಲನ ಶಕ್ತಿಯನ್ನು ಬಳಸಿಕೊಂಡು ಕ್ಷುದ್ರಗ್ರಹದ ಪಥವನ್ನು ಬದಲಾಯಿಸುವ ಸಾಮರ್ಥ್ಯವನ್ನು ಬಾಹ್ಯಾಕಾಶ ನೌಕೆಯು ಹೊಂದಿದೆಯೇ ಎಂದು ಅವಲೋಕಿಸಲು ಈ ಕಾರ್ಯಾಚರಣೆಯನ್ನು ರೂಪಿಸಲಾಗಿತ್ತು. ಭೂಮಿಗೆ ಆಕಾಶ ಕಾಯಗಳಿಂದ ಹಾನಿಯಾಗದಂತೆ ತಡೆಯುವುದು ಇದರ ಉದ್ದೇಶವಾಗಿತ್ತು. ಇದನ್ನೂ ಓದಿ ಸಕ್ರಿಯವಾಗಿರುವ ‘ಮಂಗಳ ಯಾನ’: ಇಂದು ಇಸ್ರೊದಲ್ಲಿ ರಾಷ್ಟ್ರಮಟ್ಟದ ಸಭೆ ಇಸ್ರೊದ ಹೈಬ್ರಿಡ್ ಮೋಟರ್‌ ಪರೀಕ್ಷೆ ಯಶಸ್ವಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.