ಚಂದ್ರಯಾನ–3 ನೌಕೆ ಇಳಿಯಲು ಚಂದ್ರನಲ್ಲಿ ವಿಸ್ತಾರ ನೆಲೆ ಗುರುತಿಸಿದ ಇಸ್ರೊ ನವದೆಹಲಿ: ಚಂದ್ರನ ದಕ್ಷಿಣ ಧ್ರುವದ ಬಳಿಯ ನಾಲ್ಕು ಕಿ.ಮೀ ಉದ್ದದ ಮತ್ತು 2.5 ಕಿ.ಮೀ ಅಗಲದ ಪ್ರದೇಶವು ಆಗಸ್ಟ್ ಮೂರನೇ ವಾರದಲ್ಲಿ ’ಚಂದ್ರಯಾನ-3‘ ಇಳಿಯುವ ಜಾಗವಾಗಿರಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಅಧ್ಯಕ್ಷ ಎಸ್ ಸೋಮನಾಥ್ ಸೋಮವಾರ ತಿಳಿಸಿದರು. ಚಂದ್ರನ ಮೇಲ್ಮೈನಲ್ಲಿ ಅಪ್ಪಳಿಸಿದ್ದ ’ಚಂದ್ರಯಾನ-2‘ ಕ್ಕೆ ಹೋಲಿಸಿದರೆ ’ಚಂದ್ರಯಾನ–3‘ಗೆ ದೊಡ್ಡ ಲ್ಯಾಂಡಿಂಗ್‌ ವಲಯವನ್ನು ಒದಗಿಸಲಾಗಿದೆ. ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಈ ಬಾರಿಯ ಕಾರ್ಯಾಚರಣೆಯಲ್ಲಿ ಹಲವು ಮಹತ್ವದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ’ಚಂದ್ರಯಾನ-2ರಂತಹ ಯಶಸ್ಸು ಆಧಾರಿತ ಯೋಜನೆಗೆ ಬದಲಾಗಿ, ಚಂದ್ರಯಾನ-3 ರಲ್ಲಿ ವೈಫಲ್ಯ ಆಧಾರಿತ ವಿನ್ಯಾಸವನ್ನು ಆರಿಸಿಕೊಂಡಿದ್ದೇವೆ! ಕಾರ್ಯಾಚರಣೆ ವೈಫಲ್ಯಕ್ಕೆ ಕಾರಣವಾಗುವ ವಿಷಯಗಳು ಯಾವುವು ಮತ್ತು ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಎಂಬುದರ ಕುರಿತು ನಾವು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ‘ ಎಂದು ’ಇಂಡಿಯಾ ಸ್ಪೇಸ್ ಕಾಂಗ್ರೆಸ್‌‘ನಲ್ಲಿ ಸೋಮನಾಥ್ ಹೇಳಿದರು. ಭಾರತದ ಚಂದ್ರಯಾನ–3 ಕಾರ್ಯಚರಣೆಯು ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಉಡಾವಣೆಗೊಳ್ಳಲಿದೆ. ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತ ಬಾಹ್ಯಾಕಾಶ ನೌಕೆಯು ಆಗಸ್ಟ್ 23ರ ಸುಮಾರಿಗೆ ಚಂದ್ರನ ಕಕ್ಷೆಯನ್ನು ತಲುಪಲಿದೆ. ನಂತರದ 15 ದಿನಗಳಲ್ಲಿ ನೌಕೆ ಚಂದ್ರನ ಮೇಲೆ ಇಳಿಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.