-2 | ಲ್ಯಾಂಡರ್ ‘ವಿಕ್ರಮ್’ ಸಂಪರ್ಕ ಕಳೆದುಕೊಳ್ಳಲು ಕಾರಣವೇನು...? ಬೆಂಗಳೂರು: ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) 2019ರಲ್ಲಿ ಕೈಗೊಂಡಿದ್ದ ಚಂದ್ರಯಾನ–2 ವಿಫಲವಾಯಿತೇ...? ‘ಇಲ್ಲ, ಇಸ್ರೊ ನಡೆಸಿದ್ದು ಅದ್ಭುತ ಪ್ರಯತ್ನ. ಇದು ಭಾಗಶಃ ಗೆದ್ದಿದೆ’ ಎಂದು ಸ್ಪೇಸ್‌ಎಕ್ಸ್‌, ನಾಸಾ ವಿಜ್ಞಾನಿಗಳು ಸಹಿತ ಜಗತ್ತಿನ ಬಾಹ್ಯಾಕಾಶ ಸಂಸ್ಥೆಯ ತಜ್ಞರು ಚಂದ್ರಯಾನ–2 ಅನ್ನು ಪ್ರಶಂಸಿಸಿದ್ದೇ ಹೆಚ್ಚು. ಅಷ್ಟಕ್ಕೂ ₹1157 ಕೋಟಿ (141 ದಶಲಕ್ಷ ಅಮೆರಿಕನ್ ಡಾಲರ್‌ ಇಂದಿನ ಮೊತ್ತ) ಮೊತ್ತದ ಚಂದ್ರಯಾನ–2 ಯೋಜನೆ ಎಲ್ಲವೂ ಸರಿಯಾಗಿಯೇ ನಡೆದಿದೆ ಎನ್ನುವಾಗ ಕೊನೆಯ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್‌ ಅನ್ನು ನಿಯಂತ್ರಿಸುವಲ್ಲಿ ಉಂಟಾದ ತಂತ್ರಾಂಶ ದೋಷದಿಂದಾಗಿ ಸಂಪರ್ಕ ಕಡಿತಗೊಂಡಿತು. ಇದು 130 ಕೋಟಿ ಭಾರತೀಯರ ಆಸೆಯನ್ನೇ ನುಚ್ಚು ನೂರು ಮಾಡಿತ್ತು. ಚಂದ್ರಯಾನ–2 ಯೋಜನೆ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಿದ್ದರು. ಯೋಜನೆ ವಿಫಲವಾಗುತ್ತಲೇ ಅಂದಿನ ನಿರ್ದೇಶಕ ಡಾ. ಕೆ.ಶಿವಂ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅವರನ್ನು ಎದೆಗವಚಿಕೊಂಡ ಪ್ರಧಾನಿ ಮೋದಿ, ‘ವಿಜ್ಞಾನ ಮತ್ತು ಮಾನವ ಜನಾಂಗದ ಅಭ್ಯುದಯಕ್ಕೆ ನೀವು ಉತ್ತಮ ಸೇವೆ ಸಲ್ಲಿಸಿದ್ದೀರಿ. ನಾವು ಕಲಿಯುತ್ತಿದ್ದೇವೆ. ನಮ್ಮ ಪ್ರಯತ್ನ ಮುಂದುವರಿಸೋಣ. ಧೈರ್ಯದಿಂದ ಮುನ್ನುಗ್ಗೋಣ. ನಾನು ಸದಾ ನಿಮ್ಮ ಜತೆಗಿದ್ದೇನೆ. ಸಂಪರ್ಕ ಸದ್ಯ ಸಾಧ್ಯವಾಗಿಲ್ಲ, ಆದರೆ ಭರವಸೆಯಿಂದ ನಿರೀಕ್ಷಿಸೋಣ.’ ಎಂದು ಸಮಾಧಾನಪಡಿಸಿದ್ದರು. ಡಾ. ಶಿವಂ ಹಾಗೂ ಅವರ ತಂಡದ ಬೆನ್ನಿಗೆ ಭಾರತ ಹಾಗೂ ಇಡೀ ಜಗತ್ತಿನ ವಿಜ್ಞಾನಿಗಳು ನಿಂತಿದ್ದರು. ಅಷ್ಟಕ್ಕೂ ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಲ್ಯಾಂಡರ್ 'ವಿಕ್ರಮ್' ಶನಿವಾರ (2019ರ ಸೆ. 7) ಬೆಳಗಿನಜಾವ 1.55ಕ್ಕೆ ಚಂದ್ರನ ನೆಲ ಸ್ಪರ್ಶ ಮಾಡುವಾಗ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿದ್ದು ಏಕೆ...? ಇದನ್ನೂ ಓದಿ: ಚಂದ್ರನ ನೆಲ ಸ್ಪರ್ಶದ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ಲ್ಯಾಂಡರ್‌ ವಿಕ್ರಮ್ ಭೂಮಿಯಿಂದ ಕಕ್ಷೆಗೆ ನೆಗೆದ ರಾಕೇಟ್‌ನಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್‌ 55 ಡಿಗ್ರಿ ವಾಲಿ ಚಂದ್ರನ ಅಂಗಳದಲ್ಲಿ ಇಳಿಯಬೇಕಿತ್ತು. ಆದರೆ ಅದು 410 ಡಿಗ್ರಿ ವಾಲಿಕೊಂಡಿತು. ಚಂದ್ರನ ನೆಲದಿಂದ 2.1 ಕಿ.ಮೀ. ಇರುವಾಗಲೇ ಸಂಪರ್ಕ ಕಡಿತಗೊಳ್ಳುತ್ತಾ ಸಾಗಿತು. 400 ಮೀಟರ್ ಇರುವಾಗ ಭೂಮಿ ಮೇಲಿರುವ ನಿಯಂತ್ರಣ ಕೇಂದ್ರದಿಂದ ಸಂಪೂರ್ಣ ಸಂಪರ್ಕ ಕಡಿತಗೊಂಡಿತು. ಚಂದ್ರನ ನೆಲವನ್ನು ಸ್ಪರ್ಶಿಸುವ ಮೊದಲು ಪ್ರತಿ ಗಂಟೆಗೆ 6 ಸಾವಿರ ಕಿ.ಮೀ. ವೇಗದಲ್ಲಿದ್ದ ವಿಕ್ರಮ್ ಲ್ಯಾಂಡರ್‌ ಶೂನ್ಯಕ್ಕೆ ತನ್ನ ವೇಗವನ್ನು ತಗ್ಗಿಸಿಕೊಳ್ಳಬೇಕಿತ್ತು. ಆದರೆ ಈ ಹಂತದಲ್ಲಿ ಉಂಟಾದ ತಂತ್ರಾಂಶದ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಲ್ಯಾಂಡರ್ ವಿಕ್ರಮ್ ಜತೆಗೆ ರೋವರ್‌ ಪ್ರಜ್ಞಾನ್ ಕೂಡಾ ಸಂಪರ್ಕ ಕಡಿದುಕೊಂಡು ಚಂದ್ರನ ಮೇಲೆ ಬಿತ್ತು. ಆದರೆ ಚಲನೆ ಇಲ್ಲದಿದ್ದರೂ ಚಂದ್ರಯಾನ– 2 ತನ್ನ ಕೆಲಸ ಮಾಡುತ್ತಿದೆ ಎಂದು ನಾಸಾ ಹೇಳಿತ್ತು. ಚಂದ್ರಯಾನ–2ರಲ್ಲಿ ಉಂಟಾದ ಸಮಸ್ಯೆ ಚಂದ್ರಯಾನ–3ರಲ್ಲಿ ಆಗದಂತೆ ಇಸ್ರೊ ವಿಜ್ಞಾನಿಗಳು ಎಚ್ಚರ ವಹಿಸಿದ್ದಾರೆ. ಹೀಗಾಗಿ ರೋವರ್ ಮತ್ತು ಲ್ಯಾಂಡರ್ ಹೊತ್ತೊಯ್ಯುತ್ತಿರುವ ನೌಕೆಯು ಸ್ಪೆಕ್ಟ್ರೊ–ಪೊಲಾರಿಮೆಟ್ರಿ (ಶೇಪ್‌) ಎಂಬ ಸಾಧನವನ್ನು ತೆಗೆದುಕೊಂಡು ಹೋಗಲಿದೆ. ಇದು ಚಂದ್ರನಿಂದ ಭೂಮಿಯ ಮೇಲಿನ ಧ್ರುವೀಯ ಅಂತರವನ್ನು ಲೆಕ್ಕ ಹಾಕಲಿದೆ. ಹೀಗಾಗಿ ಭೂಮಿ ಮೇಲಿರುವ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ಈ ಕುರಿತಂತೆ ಎಲ್ಲಾ ರೀತಿಯ ಪ್ರಯೋಗಗಳನ್ನು ಇಸ್ರೊ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲು ಜುಲೈ 13ರಂದು ಮಧ್ಯಾಹ್ನ 2.30ಕ್ಕೆ ಉಡ್ಡಯನಕ್ಕೆ ಸಮಯ ನಿಗದಿಪಡಿಸಲಾಗಿತ್ತು. ನಂತರ ಅದನ್ನು ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಇಸ್ರೊ ಮುಂದೂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.