-3 | ಭೂಮಿಯ ಸುತ್ತ ಮೂರನೇ ಕಕ್ಷೆಗೆ ಇಂದು ಏರಲಿರುವ ಬಾಹ್ಯಾಕಾಶ ನೌಕೆ ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಮಹತ್ವಾಕಾಂಕ್ಷೆಯ ಚಂದ್ರಯಾನ–3 ಯೋಜನೆ ಯಶಸ್ವಿಯಾಗಿ ತನ್ನ ಕಾರ್ಯಾಚರಣೆ ಮುಂದುವರಿಸಿದೆ. ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ನಭಕ್ಕೆ ಚಿಮ್ಮಿದ ಮಾರ್ಕ್ 3 ರಾಕೇಟ್‌, ಲ್ಯಾಂಡರ್ ಹಾಗೂ ರೋವರ್‌ ಹೊಂದಿದ ನೌಕೆ ಸರಿಯಾದ ಕಕ್ಷೆಗೆ ಸೇರಿಸಿತ್ತು. ಸೋಮವಾರ ಎರಡನೇ ಕಕ್ಷೆಗೆ ಯಶಸ್ವಿಯಾಗಿ ಏರಿತು. ಹೀಗಾಗಿ ಸದ್ಯ ಇದು 41603 ಕಿ.ಮೀ. 226 ಕಿ.ಮೀ. ಕಕ್ಷೆಯಲ್ಲಿದೆ. ಚಂದ್ರನ ದಕ್ಷಿಣ ಧ್ರುವದತ್ತ ತಲುಪಲು ನೌಕೆಗೆ ಅಗತ್ಯವಿರುವ ನೂಕುಬಲ ನೀಡುವ ದ್ವಿತೀಯ ಹಂತದ ಪ್ರಕ್ರಿಯೆಯೂ ಯಶಸ್ವಿಯಾಗಿದೆ. ಮುಂದಿನ ಹಂತದ ಪ್ರಕ್ರಿಯೆಯು ಇಂದು (ಮಂಗಳವಾರ) ಭಾರತೀಯ ಕಾಲಮಾನ ಮಧ್ಯಾಹ್ನ 2ರಿಂದ 3 ಗಂಟೆಯ ನಡುವೆ ನಡೆಯಲಿದೆ ಎಂದು ಹೇಳಿದೆ. ಆಗಸ್ಟ್‌ 1ರಿಂದ ಚಂದ್ರನ ಕಕ್ಷೆಗೆ ಗಗನನೌಕೆಯನ್ನು ಸೇರಿಸುವ ಕಾರ್ಯ ಆರಂಭವಾಗಲಿದೆ. ಭೂಕಕ್ಷೆಯನ್ನು ದಾಟಿ ಚಂದಿರನಲ್ಲಿ ಇಳಿಯಲು ಪ್ಯೊಪಲ್ಷನ್‌ ಮಾಡ್ಯೂಲ್‌ಗೆ ಅಗತ್ಯ ನೂಕುಬಲ ಬೇಕಿದೆ. ಹಾಗಾಗಿ, ಜುಲೈ 31ರವರೆಗೆ ಈ ಪ್ರಕ್ರಿಯೆಯನ್ನು ವಿಜ್ಞಾನಿಗಳು ಮುಂದುವರಿಸಲಿದ್ದಾರೆ ಎಂದು ವಿವರಿಸಿದೆ. ಆಗಸ್ಟ್‌ 17ರಂದು ಪ್ಯೊಪಲ್ಷನ್‌ ಮಾಡ್ಯೂಲ್‌ ಮತ್ತು ಲ್ಯಾಂಡರ್ ಮಾಡ್ಯೂಲ್‌ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್‌ 23ರ ಸಂಜೆ 5.47ಕ್ಕೆ ಲ್ಯಾಂಡರ್‌ ಅನ್ನು ಸುರಕ್ಷಿತವಾಗಿ ‘ಸಾಫ್ಟ್‌ ಲ್ಯಾಂಡಿಂಗ್‌’ ಮಾಡಲಾಗುತ್ತದೆ ಎಂದು ತಿಳಿಸಿದೆ. ಚಂದ್ರನ ನೆಲದ ಮೇಲೆ ಇಳಿದು ಸೂರ್ಯನ ಬೆಳಕು ದೊರಕುವ 14 ದಿನಗಳ ಕಾಲ ಪ್ರಯೋಗ ಕೈಗೊಳ್ಳಲಿದೆ. ಜಗತ್ತಿನ ಎಲ್ಲ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು, ಸಂಶೋಧಕರು ಮತ್ತು ಖಗೋಳ ಆಸಕ್ತಿ ಇರುವ ಜನ ಸಾಮಾನ್ಯರಿಗೆ ಇದು ಅತ್ಯಂತ ಮಹತ್ವದ ಘಟನೆಯಾಗಲಿದೆ. ಅಂದು ಕೊಂಡಂತೆ ನಡೆದರೆ ಇದುವರೆಗೂ ಯಾವ ದೇಶವೂ ಸಾಧಿಸದ ಸಾಧನೆ ನಮ್ಮ ದೇಶದ್ದಾಗಲಿದೆ. ಇದನ್ನೂ ಓದಿ: ‘ಚಂದ್ರಯಾನ–3’ ನೌಕೆ ಕಕ್ಷೆಗೆ ಏರಿಸುವ ಮೊದಲ ಪ್ರಕ್ರಿಯೆ ಯಶಸ್ವಿ ನಾಲ್ಕು ವರ್ಷಗಳ ಹಿಂದೆ ಕೈಗೊಂಡ ಚಂದ್ರಯಾನ – 2 ಯೋಜನೆ ಕೂದಲೆಳೆಯಲ್ಲಿ ಅಪಯಶಸ್ಸು ಕಂಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ವ್ಯೋಮ ನೌಕೆಯನ್ನಿಳಿಸಿದ ಪ್ರಥಮ ದೇಶ ಭಾರತ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಿತ್ತು. ಸದಾ ನಮ್ಮಿಂದ ಮರೆಯಾಗಿಯೇ ಇರುವ ಚಂದ್ರನ ದಕ್ಷಿಣ ಭಾಗದ ನೆಲದ ಮೇಲೆ ಮೃದುವಾಗಿ (ಸಾಫ್ಟ್ ಲ್ಯಾಂಡಿಂಗ್) ಪ್ರಯೋಗ ನೌಕೆಯನ್ನಿಳಿಸುವ ಮೊದಲ ಪ್ರಯತ್ನ ಅಂದು ಕೈಗೂಡಿರಲಿಲ್ಲ. ಭಾರತೀಯ ಬಾಹ್ಯಾಕಾಶಹ ವಿಜ್ಞಾನಿಗಳ ಅಪರೂಪದ ಪ್ರಯತ್ನ ಸಫಲವಾಗಲಿ ಎಂದು ಬಯಸಿದ್ದ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿತ್ತು. ವೈಫ್ಯಲ್ಯದ ನೆನಪು ಹಸಿಯಾಗಿರುವಾಗಲೇ ಇಸ್ರೋ ಮತ್ತೊಂದು ಚಂದ್ರಯಾನ ಆರಂಭಿಸಿದೆ. ಅಲ್ಲಿನ ‘ಚಂದ್ರಹಿಮ’ದಲ್ಲಿ ಅಪಾರ ನೀರಿದೆ ಎಂಬ ನಿರೀಕ್ಷೆ ವಿಶ್ವ ವಿಜ್ಞಾನಿಗಳದ್ದು. ಅಲ್ಲದೆ ಅಲ್ಲಿರುವ ದೈತ್ಯ ಕುಳಿಗಳಲ್ಲಿ ಸೌರವ್ಯೂಹದ ಉಗಮದ ಮಾಹಿತಿ ಸಿಗಬಹುದೆಂಬ ಆಸೆ ಹೊತ್ತು ಅಲ್ಲಿಗೆ ಪಯಣ ಕೈಗೊಳ್ಳುತ್ತಿರುವ ಭಾರತದ ಎರಡನೆಯ ಪ್ರಯತ್ನವಿದು. ಅಮೆರಿಕ ತನ್ನ ಆರ್ಟೆಮಿಸ್ – 3 ಯೋಜನೆಯಲ್ಲಿ ಮನುಷ್ಯನನ್ನೇ ಅಲ್ಲಿಗೆ ಕಳುಹಿಸುವ ನೀಲ ನಕ್ಷೆ ತಯಾರುಮಾಡಿಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.