ಚಂದ್ರಯಾನ–3: ಜುಲೈನಲ್ಲಿ ಉಡಾವಣೆ ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಯೋಜನೆಯ ಪ್ರಕಾರವೇ ನಡೆದರೆ, ಜುಲೈ ಎರಡನೇ ವಾರ ‘ಚಂದ್ರಯಾನ–3’ ಉಡಾವಣೆ ನಡೆಯಲಿದೆ. ಅತ್ಯಂತ ಸೂಕ್ಷ್ಮ ತಂತ್ರಜ್ಞಾನವನ್ನು ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ–3 ಬಾಹ್ಯಾಕಾಶ ನೌಕೆಯನ್ನು ಇಳಿಸಲಾಗುವುದು. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್‌ ರಿಗೊಲಿತ್, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್‌ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುವುದು. ಚಂದ್ರಯಾನ–3 ಉಡಾವಣೆ ಜುಲೈ ಎರಡನೇ ವಾರಕ್ಕೆ ನಿಗದಿಯಾಗಿದೆ ಎಂದು ಇಸ್ರೊ ಅಧಿಕಾರಿಗಳು ‘ಪಿಟಿಐ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ‘ಚಂದ್ರನ ವಿಜ್ಞಾನ’ ವಿಷಯವನ್ನು ಆಧರಿಸಿ ವೈಜ್ಞಾನಿಕ ಉಪಕರಣಗಳನ್ನು ಲ್ಯಾಂಡರ್ ಮತ್ತು ರೋವರ್‌ಗಳಿಗೆ ಅಳವಡಿಸಲಾಗುವುದು. ಅಲ್ಲದೇ, ಸ್ಪೆಕ್ಟ್ರೊ–ಪೊಲಾರಿಮೆಟ್ರಿ ಎಂಬ ಸಾಧನವನ್ನೂ ಅಳವಡಿಸಲಾಗುವುದು. ಇದರ ಮೂಲಕ ಭೂಮಿಯಿಂದ ಹೊಮ್ಮುವ ಬೆಳಕಿನ ಧ್ರುವೀಕರಣವನ್ನು ಚಂದ್ರನ ಕಕ್ಷೆಯಿಂದಲೇ ಅಧ್ಯಯನ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಉಡಾವಣೆ ಸಂದರ್ಭದಲ್ಲಿ ಉಂಟಾಗುವ ಅತ್ಯಧಿಕ ವೇಗ ಮತ್ತು ಅತೀವ ಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯದ ಅಗತ್ಯ ಪರೀಕ್ಷೆಗಳನ್ನು ಮಾರ್ಚ್‌ನಲ್ಲಿಯೇ ನಡೆಸಲಾಗಿದೆ. ಚಂದ್ರಯಾನ–3 ಅನ್ನು ಎಲ್‌ಎಂವಿ3 (ಉಡಾವಣಾ ವಾಹನ ಮಾರ್ಕ್3) ಮೂಲಕ ಉಡಾವಣೆ ಮಾಡಲಾಗುವುದು. ಹಿಂದೆ ಇದನ್ನು ಜಿಎಸ್‌ಎಲ್‌ವಿ ಎಂಕೆ 3 ಎಂದು ಕರೆಯಲಾಗುತ್ತಿತ್ತು. ಶ್ರೀಹರಿಕೋಟದಿಂದ ಉಡಾವಣೆ ನಡೆಯಲಿದೆ. ಚಂದ್ರಯಾನ–3 ಯೋಜನೆ ಚಂದ್ರಯಾನ–2 ಮುಂದುವರಿದ ಭಾಗವಾಗಿದ್ದು, ಚಂದ್ರನ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸುವುದು ಮತ್ತು ರೋವರ್‌ ಸಂಚರಿಸುವ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾಗಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.