ಮೊಟ್ಟೆ: ಗಂಡೋ? ಹೆಣ್ಣೋ? ಮೊಟ್ಟೆಯಲ್ಲಿ ಗಂಡು, ಹೆಣ್ಣು ಎಂದಿರಾ? ಮೊಟ್ಟೆ ಎಂದರೆ ಇನ್ನೂ ಹುಟ್ಟದ ಕೋಳಿ ಅಥವಾ ಹುಂಜವಷ್ಟೆ. ಅದರೊಳಗೆ ಇರುವುದು ಕೋಳಿಯೋ ಹುಂಜವೋ ಎಂದು ತಿಳಿಯುವುದು, ಮೊಟ್ಟೆ ಮೊದಲೋ ಕೋಳಿ ಮೊದಲೋ ಎಂಬುದನ್ನು ಅರ್ಥ ಮಾಡಿಕೊಂಡವರಿಗೂ ಬಹುಶಃ ಸಾಧ್ಯವಾಗಲಿಕ್ಕಿಲ್ಲ! ಮೊಟ್ಟೆ ಒಡೆದ ಮೇಲಷ್ಟೆ ಅದು ಕೋಳಿಯೋ ಹುಂಜವೋ ಎನ್ನುವುದನ್ನು ತಿಳಿಯಬಹುದು. ಈ ಸಂಕಟ ಕೋಳಿ ಹಾಗೂ ಮೊಟ್ಟೆ ಉದ್ಯಮಕ್ಕೆ ಸದಾ ಸವಾಲು. ಅಂತಹ ಸವಾಲಿಗೆ ಉತ್ತರ ಎನ್ನುವ ಹಾಗೆ ಅಮೆರಿಕೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಇಂಜಿನಿಯರುಗಳು ಒಂದು ಹೊಸ ತಂತ್ರವನ್ನು ರೂಪಿಸಿದ್ದಾರಂತೆ. ಮೊಟ್ಟೆಯಿಂದ ಸೂಸುವ ಗಾಳಿಯನ್ನೇ ಮೂಸಿ ಅದು ಗಂಡೋ ಹೆಣ್ಣೋ ಎಂದು ನಿರ್ಧರಿಸಬಹುದಂತೆ. ಮೊಟ್ಟೆ ಒಂದು ಸಹಜವಾದ ಪ್ಯಾಕೇಜಷ್ಟೆ. ಬೆಳೆಯುತ್ತಿರುವ ಕೋಳಿಯನ್ನೋ ಹುಂಜವನ್ನೋ ಭದ್ರವಾದ, ಆದರೆ ಗಾಳಿ, ತೇವಾಂಶ ಸಂಗ್ರಹವಾಗದಂತಹ ರಂಧ್ರಭರಿತ ಹೊದಿಕೆಯೊಳಗೆ ಪ್ಯಾಕ್‌ ಮಾಡಿದ ವಸ್ತುವೇ ಮೊಟ್ಟೆ. ಈ ಹೊದಿಕೆಯನ್ನು ಒಡೆದರೆ ಒಳಗಿರುವ ಜೀವ ಬದುಕುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಷ್ಟೆ. ಹಾಗಿರುವಾಗ, ಒಳಗಿರುವ ಭ್ರೂಣವು ಹುಂಜವಾಗಿ ಬೆಳೆಯುತ್ತದೆಯೋ, ಅಥವಾ ಕೋಳಿಯಾಗಿ ಬೆಳೆಯುತ್ತದೆಯೋ ಎನ್ನುವುದು ಚಿದಂಬರರಹಸ್ಯವೇ ಸರಿ. ಈ ಗುಟ್ಟನ್ನು ರಟ್ಟು ಮಾಡಲು ಸದ್ಯಕ್ಕೆ ಮೊಟ್ಟೆಯೊಳಗೆ ಸೂಜಿ ಚುಚ್ಚಿ, ರಸವನ್ನು ಹೀರಿ, ಅದರಲ್ಲಿರುವ ಡಿಎನ್‌ಎಯನ್ನು ವಿಶ್ಲೇಷಿಸುವುದೊಂದೇ ಹಾದಿ. ಇದು ಭ್ರೂಣಕ್ಕೂ ಅಪಾಯಕಾರಿ; ಜೊತೆಗೆ ಉತ್ತರ ದೊರೆಯುವುದರೊಳಗೆ ಮೊಟ್ಟೆ ಸಾಕಷ್ಟು ಬಲಿತಿರಲೂ ಬಹುದು. ಹೀಗಾಗಿ ತಕ್ಷಣವೇ ಮೊಟ್ಟೆಯನ್ನು ಗಂಡೋ ಹೆಣ್ಣೋ ಎಂದು ಗುರುತಿಸುವ ತಂತ್ರಕ್ಕೆ ಬಹಳ ಬೇಡಿಕೆ ಇದೆ. ಕಾರಣ ಇಷ್ಟೆ. ಮೊಟ್ಟೆ ಇಡುವ ಉದ್ಯಮಕ್ಕೆ ಬೇಕಾದ ಹೆಣ್ಣು ಕೋಳಿಗಳನ್ನಷ್ಟೆ ಇಟ್ಟುಕೊಂಡು ಗಂಡು ಕೋಳಿಮರಿಯನ್ನು ಕೊಲ್ಲುತ್ತಾರೆ. ಹೀಗೆ ಪ್ರತಿ ವರ್ಷವೂ ಪ್ರಪಂಚದಾದ್ಯಂತ ಏನಿಲ್ಲವೆಂದರೂ ಇಂದು ಪ್ರಪಂಚದ ಒಟ್ಟಾರೆ ಜನಸಂಖ್ಯೆಗೆ ಸಮಾನವಾದಷ್ಟು ಕೋಳಿಮರಿಗಳನ್ನು ಕೊಲ್ಲಲಾಗುತ್ತದೆ. ಮೊಟ್ಟೆಯ ಸ್ಥಿತಿಯಲ್ಲಿಯೇ ಅವುಗಳ ವಿಧಿ ತಿಳಿದರೆ, ಆ ಮೊಟ್ಟೆಗಳನ್ನು ಮರಿಯಾಗದಂತೆ ತಡೆಯಬಹುದಲ್ಲ? ಈ ಕೋಟಿಗಟ್ಟಲೆ ಹತ್ಯೆಯ ಸಂಕಟ ತಡೆಯಬಹುದಲ್ಲ ಎನ್ನುವುದು ಆಶಯ. ಈ ಆಶಯದಿಂದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಮೆಕ್ಯಾನಿಕಲ್‌ ಇಂಜಿನೀಯರಿಂಗ್‌ ವಿಭಾಗದ ಥಾಮಸ್‌ ಟರ್ಪೆನ್‌ ಮತ್ತು ಸಂಗಡಿಗರು ಮೊಟ್ಟೆಯ ವಾಸನೆಗಳಿಂದಲೇ ಅವು ಗಂಡೋ ಹೆಣ್ಣೋ ಎಂದು ಗುರುತಿಸಬಹುದೇ ಎಂದು ಪ್ರಶ್ನಿಸಿ ಪ್ರಯೋಗಗಳನ್ನು ಕೈಗೊಂಡಿದ್ದಾರೆ. ರಂಧ್ರಮಯವಾದ ಹೊದಿಕೆಯೊಳಗಿಂದ ಭ್ರೂಣ ಉಸಿರಾಡುತ್ತದಷ್ಟೆ. ಆ ಸಮಯದಲ್ಲಿ ಅದು ಹೊರಸೂಸಿದ ಗಾಳಿಯಲ್ಲಿ ಹಲವಾರು ರಾಸಾಯನಿಕಗಳಿರುತ್ತವೆ. ಈ ರಾಸಾಯನಿಕಗಳನ್ನು ಗುರುತಿಸಿದರೆ ಬಹುಶಃ ಮೊಟ್ಟೆ ಗಂಡಾಗುತ್ತದೋ ಹೆಣ್ಣಾಗುತ್ತದೋ ಎಂಬುದು ತಿಳಿಯಬಹುದು. ಆದರೆ ಇದಕ್ಕಾಗಿ ಮೊಟ್ಟೆಯಿಂದ ಹೊರ ಸೂಸುವ ಗಾಳಿಯನ್ನು ಹಿಡಿಯಬೇಕಷ್ಟೆ. ಟರ್ಪೆನ್‌ ಮತ್ತು ಸಂಗಡಿಗರು ಇದಕ್ಕಾಗಿ ಮೊಟ್ಟೆಗಳನ್ನು ಜತನದಿಂದ ಎತ್ತಿ ಇಡಲು ಬಳಸುವ ರಬ್ಬರಿನ ಹೀರಕಗಳನ್ನೇ ಪರಿವರ್ತಿಸಿದ್ದಾರೆ. ಪುಟ್ಟ ರಬ್ಬರಿನ ಬೋಗುಣಿಯಂತಹ ಈ ಹೀರಕಗಳನ್ನು ಒತ್ತಿದಾಗ ಗಾಳಿ ಹೊರಹೋಗಿ, ನಿರ್ವಾತ ಉಂಟಾಗುತ್ತದೆ. ಮೊಟ್ಟೆ ಅದಕ್ಕೆ ಭದ್ರವಾಗಿ ಅಂಟಿಕೊಳ್ಳುತ್ತದೆ. ಈ ಹೀರಕವನ್ನೇ ಸ್ವಲ್ಪ ಮಾರ್ಪಡಿಸಿ, ಅದು ಮೊಟ್ಟೆಯ ಸುತ್ತಲೂ ಇರುವ ಗಾಳಿಯನ್ನು ಸಂಗ್ರಹಿಸುವಂತೆ ಮಾಡಿದ್ದಾರೆ. ಹೀಗೆ ಸಂಗ್ರಹಿಸಿದ ಮೊಟ್ಟೆಯ ಉಸಿರನ್ನು ‘ಜಿಸಿ-ಎಂಸಿ’ ಎನ್ನುವ ತಂತ್ರದಿಂದ ವಿಶ್ಲೇಷಿಸಿದ್ದಾರೆ. ಜಿಸಿ-ಎಂಸಿ, ಅರ್ಥಾತ್‌ ‘ಗ್ಯಾಸ್‌ ಕ್ರೊಮಾಟೊಗ್ರಫಿ-ಮಾಸ್‌ ಸ್ಪೆಕ್ಟ್ರೋಮೆಟ್ರಿ’ ತಂತ್ರ ಅತ್ಯಲ್ಪ ರಾಸಾಯನಿಕವಿದ್ದರೂ ಅದನ್ನು ಗುರುತಿಸಿ, ಅದರ ಅಣುಗಾತ್ರಕ್ಕೆ ತಕ್ಕಂತೆ ವಿಂಗಡಿಸುತ್ತದೆ. ಹೀಗೆ ಒಂದಿಷ್ಟು ಉಸಿರಿನಲ್ಲಿ ಇರಬಹುದಾದ ಎಲ್ಲ ರಾಸಾಯನಿಕದ ಅಣುಗಳನ್ನೂ ಗಾತ್ರಕ್ಕೆ ಅನುಗುಣವಾಗಿ ವಿಂಗಡಿಸಬಹುದು. ಅನಂತರ ವಿವಿಧ ಮೊಟ್ಟೆಗಳ ಉಸಿರಿನಲ್ಲಿ ಇರುವ ವಿವಿಧ ರಾಸಾಯನಿಕಗಳನ್ನು ಗುರುತಿಸಿದ್ದಾರೆ. ಗಂಡಿನಲ್ಲಿ ಯಾವ್ಯಾವ ರಾಸಾಯನಿಕಗಳಿವೆ, ಹೆಣ್ಣಿನ ಉಸಿರಿನಲ್ಲಿ ಯಾವ್ಯಾವುದಿವೆ ಎಂದು ಪತ್ತೆ ಮಾಡಿದ್ದಾರೆ. ಇದಕ್ಕಾಗಿ ಡಿಎನ್‌ಎ ತಂತ್ರವನ್ನು ಬಳಸಿ ಮೊದಲೇ ಮೊಟ್ಟೆ, ಗಂಡೋ ಹೆಣ್ಣೋ ಎಂದು ಪರಿಶೀಲಿಸಲಾಗಿತ್ತು. ವಿಶ್ಲೇಷಣೆಯ ನಂತರ ದೊರೆತ ಫಲಿತಾಂಶದ ಆಧಾರದ ಮೇಲೆ ಯಾವ್ಯಾವ ರಾಸಾಯನಿಕಗಳಿದ್ದರೆ ಗಂಡುಗಳೆಂದು ತಿಳಿಯಬಹುದು ಎಂದು ಅರ್ಥ ಮಾಡಿಕೊಂಡು ಆ ರಾಸಾಯನಿಕಗಳು ಹೆಚ್ಚಿರುವ ಮೊಟ್ಟೆಗಳನ್ನು ಗುರುತಿಸಲು ಪ್ರಯತ್ನಿಸಿದ್ದಾರೆ. ವಿವಿಧ ವಯಸ್ಸಿನ ಮೊಟ್ಟೆಗಳಿಂದ ಸಂಗ್ರಹಿಸಿದ ಉಸಿರಿನಲ್ಲಿ ಎಂಟನೆಯ ದಿನದ ಮೊಟ್ಟೆಗಳಿಂದ ಬಂದ ಉಸಿರಿನಲ್ಲಿ ಹೀಗೆ ಸ್ಪಷ್ಟವಾದ ವ್ಯತ್ಯಾಸ ಇರುತ್ತದೆಂದು ತಿಳಿಯಿತು. ಗಂಡೋ ಹೆಣ್ಣೋ ಎಂದು ಪರೀಕ್ಷಿಸದ ಎಂಟು ದಿನ ವಯಸ್ಸಾದ ಮೊಟ್ಟೆಗಳನ್ನೂ ಇದೇ ತಂತ್ರದಿಂದ ವಿಶ್ಲೇಷಿಸಿ, ಗಂಡುಮೊಟ್ಟೆಗಳನ್ನೂ ಹೆಣ್ಣುಮೊಟ್ಟೆಗಳನ್ನೂ ವಿಂಗಡಿಸಲು ಪ್ರಯತ್ನಿಸಿದ್ದಾರೆ. ಎಂಟು ದಿನಗಳ ವಯಸ್ಸಿನ ಮೊಟ್ಟೆಗಳನ್ನು ಹೀಗೆ ಪರಿಶೀಲಿಸಿದಾಗ ಹತ್ತರಲ್ಲಿ ಎಂಟು ಬಾರಿ ನಿಖರವಾದ ಫಲಿತಾಂಶ ಸಿಕ್ಕಿತಂತೆ. ಅಂದರೆ ಹತ್ತು ಮೊಟ್ಟೆಗಳನ್ನು ಪರಿಶೀಲಿಸಿದಾಗ, ಎಂಟು ಮೊಟ್ಟೆಗಳು ಗಂಡೋ ಹೆಣ್ಣೋ ಎಂದು ಖಚಿತವಾಗಿ ಹೇಳಬಹುದಾಯಿತು. ಕೇವಲ ಇಪ್ಪತ್ತು ಶತಾಂಶದ ಲಿಂಗವೇನೆಂದು ಗೊತ್ತಾಗಲಿಲ್ಲ ಎಂದು ಇವರು ಪ್ರಕಟಿಸಿದ್ದಾರೆ. ಅಂತೂ ಹುಟ್ಟುವ ಮೊದಲೇ ಕೋಳಿಯೋ ಹುಂಜವೋ ಎಂದು ತಕ್ಕ ಮಟ್ಟಿಗಾದರೂ ತೀರ್ಮಾನಿಸುವುದು ಸಾಧ್ಯ ಎಂದಾಯಿತು. ಆದರೂ ಇದು ಸುಲಭವಲ್ಲ ಎನ್ನಿ. ಈ ಸಂಶೋಧನೆಯ ವಿವರಗಳನ್ನು ಪಿಎಲ್‌ಓಎಸ್‌ ಒನ್‌ ಪತ್ರಿಕೆ ಪ್ರಕಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.