ಸೆಮಿಕಂಡಕ್ಟರ್‌ ಎಂಬ ಸರ್ವವ್ಯಾಪಿ ಶರತ್‌ ಭಟ್‌ ಸೇರಾಜೆ ಸೆಮಿಕಂಡಕ್ಟರುಗಳು ಈಗ ಸುದ್ದಿಯಲ್ಲಿರುವುದನ್ನು ನೋಡಿದ್ದೇವೆ. ಇದೇನಿದು ಸೆಮಿಕಂಡಕ್ಟರ್‌; ಇದರ ಪ್ರಯೋಜನವೇನು – ಎಂಬ ಪ್ರಶ್ನೆ ಕೆಲವರ ಮನಸ್ಸಿನಲ್ಲಿಯಾದರೂ ಮೂಡಿರಬಹುದು. ಹಿರಣ್ಯಕಶಿಪುವು ಅಬ್ಬರಿಸಿ, ಪ್ರಹ್ಲಾದನ ಹತ್ತಿರ, ‘ಹ್ಞಾ, ಎಲ್ಲಿರುವನು ಆ ನಿನ್ನ ಹರಿ?’ ಎಂದು ಕೇಳಿದಂತೆ, ‘ಎಲ್ಲಿರುವುದು ಆ ನಿನ್ನ ಸೆಮಿಕಂಡಕ್ಟರು?’ ಎಂದು ಕೇಳಿದನಾದರೆ, ಅದು ಎಲ್ಲೆಲ್ಲಿಯೂ ಇರುವುದು ಎಂದೇ ಹೇಳಬೇಕಾದೀತೇನೋ. ಸರ್ವವ್ಯಾಪಿಯಾದ, ಸರ್ವತ್ರ ಗೋಚರವಾದ ಮೊಬೈಲು ಫೋನುಗಳಲ್ಲಿ ಬೇಕಾದಷ್ಟು ಸೆಮಿಕಂಡಕ್ಟರಿನ ಉಪಕರಣಗಳಿರುತ್ತವೆ; ಮನೆ ಮನೆಗಳಲ್ಲಿ ಇರುವ ದೂರದರ್ಶನಗಳಲ್ಲಿ ಅವು ಇರುತ್ತವೆ; ರಸ್ತೆಗಳಲ್ಲಿ ಓಡುತ್ತಿರುವ ಕಾರುಗಳಲ್ಲಿ ಅದಿದೆ; ಎಲ್ಲೆಲ್ಲೂ ಇರುವ ಲ್ಯಾಪ್‌ಟಾಪುಗಳಲ್ಲಿಯೂ ಅದು ಧಾರಾಳವಾಗಿ ಇದೆ. ಮೊಬೈಲಿನ ಒಳಗೋ, ಟಿವಿಯ ಒಳಗೋ ಚಿಪ್ಪುಗಳು ಇರುವುದನ್ನು ಹಲವರು ನೋಡಿರಬಹುದು. ಆ ಚಿಪ್ಪುಗಳ ಒಳಗೆ ಇರುವುದು ಸೆಮಿಕಂಡಕ್ಟರುಗಳೇ. ಹಿಂದೆ ನಮ್ಮಲ್ಲಿ ಒಂದು ತರಹದ ರೇಡಿಯೋಗಳನ್ನು ‘ಟ್ರಾನ್ಸಿಸ್ಟರ್’ ಎನ್ನುತ್ತಿದ್ದರು; ಆ ರೇಡಿಯೋಗಳ ಒಳಗೆ ಒಂದು ಬಿಡಿಭಾಗವಾಗಿ ‘ಟ್ರಾನ್ಸಿಸ್ಟರ್’ ಎಂಬ ಉಪಕರಣ ಇದ್ದದ್ದೇ ಅದಕ್ಕೆ ಆ ಹೆಸರು ಬರಲು ಕಾರಣ. ಇದೊಂದು ರೀತಿ ಮನುಷ್ಯನ ದೇಹದಲ್ಲಿ ಮೆದುಳು ಇರುವ ಕಾರಣ ಮನುಷ್ಯನನ್ನು ಮನುಷ್ಯ ಎನ್ನದೆ ‘ಮೆದುಳು’ ಎಂದೇ ಕರೆದಂತೆ. ಈ ಟ್ರಾನ್ಸಿಸ್ಟರ್ ಎಂಬುದೂ ಮತ್ತದೇ ಸೆಮಿಕಂಡಕ್ಟರಿನ ಉಪಕರಣ. ನಿಮ್ಮ ಮೊಬೈಲು ಫೋನಿನ ಒಳಗೆ ಸುಮಾರು ಹತ್ತು ಕೋಟಿ ಟ್ರಾನ್ಸಿಸ್ಟರ್‌ಗಳಿರುತ್ತವೆ. ನಿಮ್ಮ ಗಣಕಯಂತ್ರದ ಒಳಗೆ ಸುಮಾರು ನೂರು ಕೋಟಿ ಟ್ರಾನ್ಸಿಸ್ಟರ್‌ಗಳು ಇರುತ್ತವೆ. ಇನ್ನಷ್ಟು ಸರಳವಾಗಿ ಹೇಳುವುದಾದರೆ, ‘ಎಲೆಕ್ಟ್ರಾನಿಕ್ಸ್’, ‘ಡಿಜಿಟಲ್’ ಮುಂತಾದ ಪದಗಳು ಎಲ್ಲೆಲ್ಲ ಕಾಣಸಿಗುತ್ತವೋ ಅಲ್ಲೆಲ್ಲ ನೇಪಥ್ಯದಲ್ಲಿ ಕೆಲಸ ಮಾಡುತ್ತಿರುವುದು ‘ಸೆಮಿಕಂಡಕ್ಟರ್’ ಅಥವಾ ‘ಅರೆವಾಹಕಗಳು’ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಇವುಗಳಿಗೆ ಸಂಬಂಧಿಸಿದ ವ್ಯಾಪಾರ ವಹಿವಾಟು 570 ಬಿಲಿಯನ್ ಡಾಲರುಗಳದ್ದು, ಅಂದರೆ ಕೋಟಿ ಕೋಟಿ ಡಾಲರುಗಳದ್ದು ಎಂದು ಅಂದಾಜು ಮಾಡಲಾಗಿದೆ! ಈ ವಹಿವಾಟಿನ ಲಾಭ ಬಹುಮಟ್ಟಿಗೆ ಆಗುತ್ತಿರುವುದು ತೈವಾನ್, ದಕ್ಷಿಣ ಕೊರಿಯಾ, ಜಪಾನ್, ಚೀನಾ ಮುಂತಾದ ದೇಶಗಳಿಗೆ. ಅಂದರೆ ಇದರ ಪ್ರಮಾಣ ಚಿನ್ನದ ವ್ಯಾಪಾರ, ಅರಬ್ ದೇಶಗಳ ತೈಲದ ವಹಿವಾಟು ಇವುಗಳಿಗಿಂತಲೂ ಸ್ವಲ್ಪ ಅಧಿಕವೇ ಎನ್ನಬೇಕೇನೋ! ಇನ್ನೀಗ ಅರೆವಾಹಕಗಳು ಎಂದರೆ ಏನು ಎಂದು ನೋಡೋಣ. ‘ಅರೆವಾಹಕ’ ಎಂಬುದು ಇಂಥ ವಸ್ತುಗಳಲ್ಲಿ ವಿದ್ಯುತ್ ಪ್ರವಾಹ ಹೇಗಿರುತ್ತದೆ ಎಂಬುದನ್ನು ಸೂಚಿಸುವ ಪದ. ತನ್ನ ಮೂಲಕ ವಿದ್ಯುತ್ ಪ್ರವಾಹವನ್ನು ಚೆನ್ನಾಗಿ ಹರಿಯಲು ಬಿಡುವ ವಸ್ತುವನ್ನು ವಿದ್ಯುತ್ ವಾಹಕ( ) ಎನ್ನುತ್ತಾರೆ. ಲೋಹಗಳು, ನೀರು, ಗ್ರಾಫೈಟ್ – ಇವೆಲ್ಲ ಒಳ್ಳೆಯ ವಾಹಕಗಳು. ವಿದ್ಯುತ್ ಪ್ರವಾಹವನ್ನು ಸರಿಯಾಗಿ ಆಗಲು ಬಿಡದ ವಸ್ತುಗಳನ್ನು ಅವಾಹಕ()ಗಳೆಂದು ಕರೆಯುತ್ತಾರೆ. ಕಟ್ಟಿಗೆ, ಗಾಜು, ಪ್ಲಾಸ್ಟಿಕ್‌ – ಇವೆಲ್ಲ ಅವಾಹಕಗಳು. ಈ ಎರಡು ಪಕ್ಷಕ್ಕೂ ಸೇರದೇ ಮಾಧ್ಯಮಮಾರ್ಗವನ್ನು ಹಿಡಿಯುವ, ಇವೆರಡರ ನಡುವೆ ಬರುವ, ಈ ಎರಡರ ಗುಣಗಳ ಸಮ್ಮಿಶ್ರಣವನ್ನು ಹೊಂದಿರುವ ವಸ್ತುವೇ ‘ಅರೆವಾಹಕ’ ಅಥವಾ ‘ಸೆಮಿಕಂಡಕ್ಟರ್’. ಸರಳವಾಗಿ ಹೇಳುವುದಾದರೆ, ‘ಟ್ರಾನ್ಸಿಸ್ಟರ್’ ಎಂದರೆ ಇಂಥ ಅರೆವಾಹಕ ಗುಣವನ್ನು ಹೊಂದಿರುವ ಸ್ವಿಚ್ ಇದ್ದಂತೆ ಎನ್ನಬಹುದು. ನಮ್ಮ ಮನೆಯಲ್ಲಿ ಸ್ವಿಚ್ ಹಾಕಿದಾಗ ವಿದ್ಯುತ್ತು ಹರಿಯುತ್ತದೆ, ಆಫ್ ಮಾಡಿದಾಗ ಹರಿವು ನಿಲ್ಲುತ್ತದೆ. ಟ್ರಾನ್ಸಿಸ್ಟರ್ ಕೂಡ ಹೆಚ್ಚು ಕಡಿಮೆ ಇದೇ ಕೆಲಸವನ್ನು ಮಾಡುತ್ತದೆ. ಇದು ಎಲೆಕ್ಟ್ರಾನಿಕ್ಸಿಗೆ, ಡಿಜಿಟಲ್ ತಂತ್ರಜ್ಞಾನಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬುದು ಮುಂದಿನ ಪ್ರಶ್ನೆ. ಕಂಪ್ಯೂಟರುಗಳಿಗೆ, ಇಲೆಕ್ಟ್ರಾನಿಕ್ ಯಂತ್ರಗಳಿಗೆ ನಮ್ಮ ನಿಮ್ಮಂತೆ ಕನ್ನಡ, ಇಂಗ್ಲಿಷ್ ಭಾಷೆಗಳು ಬರುವುದಿಲ್ಲ. ಅವುಗಳ ಜೊತೆ ನಾವು ಮಾತಾಡುವುದು ದ್ವಿಮಾನ ಸಂಖ್ಯಾಪದ್ಧತಿಯ ಭಾಷೆಯಲ್ಲಿ. ಈ ಭಾಷೆಯಲ್ಲಿ ‘ಸೊನ್ನೆ’ ಮತ್ತು ‘ಒಂದು’ ಎಂಬ ಎರಡೇ ಸಂಕೇತಗಳಿರುವುದು. ಯಾವ ಮಾಹಿತಿಯನ್ನು ಬೇಕಾದರೂ ಸೊನ್ನೆ ಮತ್ತು ಒಂದುಗಳ ಭಾಷೆಯಲ್ಲಿ ಬರೆಯಬಹುದು. ಈ ಇಡೀ ಲೇಖನವನ್ನು ಬೇಕಾದರೆ ಬರೀ ಸೊನ್ನೆ ಮತ್ತು ಒಂದನ್ನು ಬಳಸಿ ಬರೆಯಬಹುದು. ಸ್ವಿಚ್ ಹಾಕಿದಾಗ ವಿದ್ಯುತ್ತು ಹರಿದರೆ ಅದು ಒಂದು, ಸ್ವಿಚ್ ಆಫ್ ಮಾಡಿದಾಗ ವಿದ್ಯುತ್ತಿನ ಹರಿವು ನಿಂತರೆ ಅದು ಸೊನ್ನೆ ಎಂದು ಮಾಡಿಕೊಂಡರೆ ವಿದ್ಯುತ್ತಿನ ಹರಿವನ್ನು ದ್ವಿಮಾನ ಸಂಖ್ಯಾಪದ್ಧತಿಯ ಭಾಷೆಗೆ ಪರಿವರ್ತನೆ ಮಾಡಿದ ಹಾಗಾಯಿತು! ಹೀಗಾಗಿ ಒಂದು ಒಳ್ಳೆಯ ಸ್ವಿಚ್ಚು ಎಲೆಕ್ಟ್ರಾನಿಕ್ಸಿನ ಭಾಷೆಯನ್ನು, ಕಂಪ್ಯೂಟರಿನ ಭಾಷೆಯನ್ನು ಮಾತನಾಡಬಲ್ಲದು. ಟ್ರಾನ್ಸಿಸ್ಟರ್‌ಗಳು, ಅರೆವಾಹಕಗಳು ಇಂಥ ಅದ್ಭುತ ಸ್ವಿಚ್ಚುಗಳು. ಹೀಗಾಗಿಯೇ ಅವುಗಳು ಅಷ್ಟೊಂದು ಉಪಯುಕ್ತವಾಗಿರುವುದು. ಸಿಲಿಕಾನ್ ಮತ್ತು ಜರ್ಮೇನಿಯಂಗಳು ವ್ಯಾಪಕವಾಗಿ ಬಳಸಲ್ಪಡುವ ಎರಡು ಮುಖ್ಯವಾದ ಅರೆವಾಹಕಗಳು. ವಿಶೇಷವೆಂದರೆ, ಈ ಅರೆವಾಹಕಗಳು ಈಗ ಡಿಜಿಟಲ್ ಕ್ರಾಂತಿಗೆ ಕಾರಣವಾದರೂ ಮೂಲದಲ್ಲಿ ಅವುಗಳನ್ನು ಕಂಡು ಹಿಡಿದವರ ತಲೆಯಲ್ಲಿದ್ದದ್ದು ಸ್ವಲ್ಪ ಬೇರೆಯದೇ ಆದ ಸಮಸ್ಯೆ. ಇವುಗಳ ಬಗ್ಗೆ ವಿಶೇಷವಾದ ಸಂಶೋಧನೆಗಳು ಆದದ್ದು ಅಮೆರಿಕದ ‘ಬೆಲ್ ಲ್ಯಾಬೋರೇಟರಿ’ ಎಂಬ ಸಂಸ್ಥೆಯಲ್ಲಿ. ವಿಜ್ಞಾನಕ್ಕೆ, ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ, ಡಿಜಿಟಲ್ ಕ್ರಾಂತಿಗೆ ಈ ಸಂಸ್ಥೆ ಕೊಟ್ಟ ಕೊಡುಗೆ ದೊಡ್ಡದು. ಇದು ಮೂಲತಃ ಒಂದು ದೂರವಾಣಿ ಸಂಸ್ಥೆ. ಇಡೀ ಅಮೆರಿಕದ ಟೆಲಿಫೋನು ವ್ಯವಸ್ಥೆಯ ಮೇಲೆ ಏಕಸ್ವಾಮ್ಯ ಹೊಂದಿದ್ದ ಬೃಹತ್ ಸಂಸ್ಥೆ. ಟೆಲಿಫೋನು ತಂತಿಗಳು ತರಂಗಗಳನ್ನು ದೂರ ದೂರಕ್ಕೆ ಒಯ್ಯಬೇಕಾದರೆ ಅವುಗಳ ಬಲ ಕುಗ್ಗದಂತೆ ಅವುಗಳಿಗೆ ಅಲ್ಲಲ್ಲಿ ಬಲವರ್ಧನೆ ಮಾಡಬೇಕು. ಹೀಗೆ ತರಂಗವರ್ಧಕಗಳಾಗಿ ಬಂದದ್ದು ಈ ಟ್ರಾನ್ಸಿಸ್ಟರ್‌ಗಳು. ಇವುಗಳು ಸ್ವಿಚ್ಚುಗಳಾಗಿ ಮಾಡುವ ಕೆಲಸವೂ ಅವರಿಗೆ ಪ್ರಯೋಜನಕ್ಕೆ ಬರುತ್ತಿತ್ತು. ಹೀಗೆ ಶುರುವಾದ ಅರೆವಾಹಕಗಳು ಎಲ್ಲಿಂದ ಎಲ್ಲಿಗೋ ಹೋಗಿ ಕ್ಷೇತ್ರವನ್ನು ವಿಸ್ತರಣೆ ಮಾಡಿಕೊಂಡು ಈಗ ಸರ್ವವ್ಯಾಪಿಯಾಗಿರುವುದು ಅಚ್ಚರಿಯೇ ಸರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.