ಚಂದ್ರನ ಸನಿಹಕ್ಕೆ ಮತ್ತೊಂದು ಹೆಜ್ಜೆ ಇಟ್ಟ ಗಗನನೌಕೆ ಬೆಂಗಳೂರು (ಪಿಟಿಐ): ‘ಚಂದ್ರಯಾನ–3’ರ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆ ಪ್ರವೇಶಿಸಿರುವ ಬೆನ್ನಲ್ಲೇ ಅದರ ವೇಗವನ್ನು ನಿಧಾನವಾಗಿ ತಗ್ಗಿಸಿ ಚಂದಿರನ 100 ಕಿ.ಮೀ ಅಂತರದ ಕೆಳಕಕ್ಷೆಗೆ ತರುವ ಮೊದಲ ಹಂತದ ಪ್ರಕ್ರಿಯೆಯು ಭಾನುವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ. ನೌಕೆಯು ಭೂಕಕ್ಷೆಯಲ್ಲಿ ಮೂರು ವಾರಗಳ ಕಾಲ ಯಶಸ್ವಿಯಾಗಿ ಪರಿಭ್ರಮಿಸಿತ್ತು. ಬಳಿಕ ಅದನ್ನು ಶನಿವಾರ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿತ್ತು. ಸಾಫ್ಟ್‌ ಲ್ಯಾಂಡಿಂಗ್‌ನ ಭಾಗವಾಗಿ ಈಗ ಇಸ್ರೊ ವಿಜ್ಞಾನಿಗಳು, ಅದರ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ‘ನೌಕೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಚಂದಿರನ ಕಕ್ಷೆಯಲ್ಲಿ ಕೈಗೊಳ್ಳಬೇಕಿರುವ ಮುಂದಿನ ಹಂತದ ಪ್ರಕ್ರಿಯೆಯು ಆಗಸ್ಟ್‌ 9ರಂದು ಮಧ್ಯಾಹ್ನ 1ಗಂಟೆಯಿಂದ 2 ಗಂಟೆಯ ನಡುವೆ ನಡೆಯಲಿದೆ’ ಎಂದು ಇಸ್ರೊ ತಿಳಿಸಿದೆ. ಚಂದ್ರನ ಕೆಳಕಕ್ಷೆವರೆಗೆ ಪ್ರೊಪಲ್ಷನ್‌ ಮಾಡೆಲ್, ‘ಲ್ಯಾಂಡರ್‌’ ಮತ್ತು ‘ರೋವರ್‌’ ಅನ್ನು ಹೊತ್ತೊಯ್ಯಲಿದೆ. ಬಳಿಕ ಇದು ಬೇರ್ಪಡುವುದಕ್ಕೂ ಮೊದಲು ಆಗಸ್ಟ್‌ 17ರ ವರೆಗೆ ನೌಕೆಯ ವೇಗವನ್ನು ನಿಧಾನಗೊಳಿಸುವ ಮೂರು ಹಂತದ ಪ್ರಕ್ರಿಯೆಗಳು ನಡೆಯಲಿವೆ. ಆಗಸ್ಟ್‌ 23ರ ಸಂಜೆ 5.47ಕ್ಕೆ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಪ್ರಕ್ರಿಯೆ ನಡೆಯಲಿದೆ ಎಂದು ವಿವರಿಸಿದೆ. ನೌಕೆಯಲ್ಲಿ ‘ಶೇಪ್’ (ಸ್ಪೆಕ್ಟ್ರೊ ಪೋಲರಿಮೆಟ್ರಿ ಆಫ್‌ ಹ್ಯಾಬಿಟೇಬಲ್ ಪ್ಲಾನೆಟ್ ಅರ್ಥ್) ಎಂಬ ಸಾಧನ ಅಳವಡಿಸಲಾಗಿದೆ. ಇದು ಚಂದ್ರನ ಕಕ್ಷೆಯಲ್ಲಿಯೇ ಪರಿಭ್ರಮಿಸಲಿದ್ದು, ಬಾಹ್ಯಾಕಾಶ ಕುರಿತು ಡೇಟಾವನ್ನು ಭೂಮಿಗೆ ರವಾನಿಸಲಿದೆ ಎಂದು ತಿಳಿಸಿದೆ. ವಿಡಿಯೊ ಬಿಡುಗಡೆ: ಚಂದ್ರನ ಕಕ್ಷೆ ಪ್ರವೇಶಿಸಿದ ತಕ್ಷಣವೇ ನೌಕೆಯು, ಚಂದ್ರನ ಮೇಲ್ಮೈ ಚಿತ್ರಣವನ್ನು ಭೂಮಿಗೆ ಕಳುಹಿಸಿದೆ. ಈ ಬಗ್ಗೆ ಇಸ್ರೊ ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಚಂದ್ರನ ಮೇಲ್ಮೈನಲ್ಲಿರುವ ಕುಳಿಗಳು ನೀಲಿ ಹಸಿರು ಬಣ್ಣದಿಂದ ಕೂಡಿರುವುದು ಕಂಡುಬರುತ್ತದೆ. ‘ಸಾಫ್ಟ್‌ ಲ್ಯಾಂಡಿಂಗ್‌ ನಿಜಕ್ಕೂ ಸವಾಲು’ ನವದೆಹಲಿ (ಪಿಟಿಐ): ‘ಚಂದ್ರನಿಂದ 100 ಕಿ.ಮೀ ಅಂತರದ ಕೆಳ ಕಕ್ಷೆಗೆ ನೌಕೆಯನ್ನು ಇಳಿಸಲು ಯಾವುದೇ ಕಷ್ಟವಾಗುವುದಿಲ್ಲ. ಆದರೆ, ಆ ನಂತರದ ಪ್ರಕ್ರಿಯೆಯು ನಿರ್ಣಾಯಕವಾಗಿದ್ದು, ಸವಾಲಿನಿಂದ ಕೂಡಿದೆ’ ಎಂದು ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್ ಹೇಳಿದ್ದಾರೆ. ಪ್ರಸ್ತುತ ನೌಕೆಯು ಚಂದ್ರನ ಸಮೀಪಕ್ಕೆ ತೆರಳಿದೆ. ಚಂದ್ರನ ಮೇಲ್ಮೈನ 4,313 ಕಿ.ಮೀ. ದೀರ್ಘ ವೃತ್ತದ ಕಕ್ಷೆಯಿಂದ 170 ಕಿ.ಮೀ.ಗೆ ಇಳಿಸಲಾಗಿದೆ. ಆಗಸ್ಟ್‌ 9ರಿಂದ 17ರ ವರೆಗೆ ವಿವಿಧ ಹಂತಗಳಲ್ಲಿ 100 ಕಿ.ಮೀ. ಅಂತರದ ಕೆಳ ಕಕ್ಷೆಗೆ ತರಲಾಗುತ್ತದೆ. ‘ನಿಗದಿತ ಸ್ಥಳದಲ್ಲಿ ಲ್ಯಾಂಡರ್‌ ಅನ್ನು ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಪ್ರಕ್ರಿಯೆಯು ಸವಾಲಿನಿಂದ ಕೂಡಿದೆ. ಆದರೆ, ಎಲ್ಲಾ ಅಗತ್ಯ ಸಿದ್ಧತೆಯನ್ನು ಪೂರ್ಣಗೊಳಿಸಿದ್ದೇವೆ. ಲ್ಯಾಂಡಿಂಗ್‌ ವೇಳೆ ಎದುರಾಗುವ ಅಡೆತಡೆಗಳನ್ನು ನಿವಾರಿಸಲೂ ಸಜ್ಜಾಗಿದ್ದೇವೆ. ಹಾಗಾಗಿ, ಈ ಬಾರಿ ನಿರೀಕ್ಷಿತ ಫಲಿತಾಂಶ ಲಭಿಸುವ ನಿರೀಕ್ಷೆಯಿದೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ‘ಚಂದ್ರಯಾನ–2’ರ ವೈಫಲ್ಯವು ನಮಗೆ ಸಾಕಷ್ಟು ಪಾಠ ಕಲಿಸಿದೆ. ಆ ವೇಳೆ ಆದ ತಪ್ಪುಗಳನ್ನು ತಿದ್ದುಕೊಂಡಿದ್ದೇವೆ. ‘ಚಂದ್ರಯಾನ–3’ರಲ್ಲಿ ಅಂತಹ ಯಾವುದೇ ತಪ್ಪುಗಳು ನುಸುಳದಂತೆ ಎಚ್ಚರಿಕೆವಹಿಸಿದ್ದೇವೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.