ಧ್ವನಿಯನ್ನು ದಯಪಾಲಿಸಿದ ಕೃತಕ ಬುದ್ಧಿಮತ್ತೆ! ಮಧ್ಯವಯಸ್ಸಿನ ಅಮೆರಿಕದ ಮಹಿಳೆಯೊಬ್ಬರು ಮಿದುಳಿನ ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗುತ್ತಾರೆ. ಪಾರ್ಶ್ವವಾಯುವಿನ ಅಡ್ಡಪರಿಣಾಮವಾಗಿ ಸಂಪೂರ್ಣವಾಗಿ ಮಾತನಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಅವರ ಧ್ವನಿ ಪೆಟ್ಟಿಗೆಯು ಧ್ವನಿಯನ್ನು ಉತ್ಪಾದಿಸುವ ಶಕ್ತಿಯನ್ನೇ ಕಳೆದುಕೊಂಡಿರುತ್ತದೆ. ಪಾರ್ಶ್ವವಾಯುವಿಗೆ ಚಿಕಿತ್ಸೆ ಪಡೆದ ಸುಮಾರು ನಾಲ್ಕು ವರ್ಷಗಳ ಕಾಲ ಮಾತನಾಡಲು ಸಾಧ್ಯವಾಗದೇ ಕಾಲ ತಳ್ಳುತ್ತಾರೆ. ಧ್ವನಿಯನ್ನು ಕೃತಕವಾಗಿ ಸೃಷ್ಟಿಸಬಲ್ಲ ತಂತ್ರಜ್ಞಾನವೊಂದರ ಶೋಧವಾಗಿದೆ ಎಂಬ ಸುದ್ದಿಯನ್ನು ತನ್ನ ಸ್ನೇಹಿತರಿಂದ ಪಡೆಯುವ ಮಹಿಳೆ ತನ್ನನ್ನು ತಾನೇ ಪ್ರಯೋಗಕ್ಕೆ ಅರ್ಪಿಸಿಕೊಂಡಿದ್ದಾರೆ. ಅವರಿಗೀಗ ನಿಂತುಹೋಗಿದ್ದ ಧ್ವನಿ ಮರುಕಳಿಸಿದೆ. ಅವರು ಧ್ವನಿಯನ್ನು ಮರಳಿ ಪಡೆದು ಸಣ್ಣ ಕಥೆ ಇಲ್ಲಿದೆ. ಸ್ಯಾನ್‌ಫ್ಯಾನ್ಸಿಸ್ಕೋದ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ ಹಾಗೂ ಬರ್ಕಲಿಯ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ ವಿಜ್ಞಾನಿಗಳು ಸುಮಾರು ನಾಲ್ಕು ವರ್ಷಗಳಿಂದ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಧ್ವನಿಪೆಟ್ಟಿಗೆ ನಿರ್ಮಿಸಿರುವ ವಿಚಾರ ಈ ಮಹಿಳೆಗೆ ದೊರೆಯುತ್ತದೆ. ನರಶಸ್ತ್ರಚಿಕಿತ್ಸೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಎಡ್ವರ್ಡ್‌ ಚಾಂಗ್ ಅವರು ಬ್ರೈನ್‌ ಕಂಪ್ಯೂಟರ್‌ ಇಂಟರ್‌ಫೇಸ್ (‘ಬಿಸಿಐ’) ಎಂಬ ಮಿದುಳು ಹಾಗೂ ಕಂಪ್ಯೂಟರ್‌ ಬೆಸೆಯುವ ಸಂಜ್ಞಾಸೇತುವೆಯನ್ನು ತಯಾರಿಸುವ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಸಂಪರ್ಕಿಸುವ ಈ ಮಹಿಳೆಯು ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ಬಳಿಕ ತಾವೇ ಮಾನವ ಪ್ರಯೋಗಕ್ಕೆ ಒಳಗಾಗುವುದಾಗಿ ಇಚ್ಛೆ ವ್ಯಕ್ತಪಡಿಸುತ್ತಾರೆ. ಇದರ ಬಳಿಕ ನಡೆಯುವ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿ ಆ ಮಹಿಳೆಗೆ ಧ್ವನಿ ಮರಳಿ ಬರುತ್ತದೆ. ಏನಿದು ತಂತ್ರಜ್ಞಾನ?: ಪ್ರತಿಷ್ಠಿತ ‘ನೇಚರ್’ ವಿಜ್ಞಾನ ನಿಯತಕಾಲಿಕೆಯಲ್ಲಿ ಈ ಸಂಶೋಧನೆಯನ್ನು ಎಡ್ವರ್ಡ್‌ ಚಾಂಗ್ ಅವರ ತಂಡವು ಪ್ರಕಟಿಸಿದೆ. ಈ ಸಂಶೋಧನೆಯು ಸಂಕೀರ್ಣವಾದುದು. ಈ ಸಂಶೋಧನೆಯನ್ನು ತಿಳಿದುಕೊಳ್ಳಬೇಕಾದರೆ ಮಾನವ ಧ್ವನಿಪೆಟ್ಟಿಗೆ ಕೆಲಸ ಮಾಡುವ ವಿಧಾನವನ್ನು ಕಲಿತುಕೊಳ್ಳುವುದು ಮುಖ್ಯ. ಧ್ವನಿಪೆಟ್ಟಿಯೆಯಲ್ಲಿರುವ ಸ್ನಾಯುಗಳು ಕಂಪಿಸಿ ವಿಶೇಷವಾದ ಧ್ವನಿಯನ್ನು ಉತ್ಪಾದಿಸುತ್ತವೆ. ಈ ಧ್ವನಿಯು ವಿಶೇಷ ಏಕೆಂದರೆ, ಪ್ರತಿಯೊಬ್ಬ ಮನುಷ್ಯನ ಧ್ವನಿಯೂ ಭಿನ್ನ. ಒಬ್ಬರ ಧ್ವನಿ ಮತ್ತೊಬ್ಬರಿಗೆ ಹೋಲದು. ಆದರೆ, ಇಲ್ಲೊಂದು ವಿಶೇಷ ವಿಜ್ಞಾನ ಕಾರ್ಯ ನಿರ್ವಹಿಸುತ್ತದೆ. ಅದೇ ಮಿದುಳಿನಿಂದ ಸಂದೇಶ. ನರಗಳ ಮೂಲಕ ಮಿದುಳಿನಿಂದ ಹೊರಡುವ ಸಂದೇಶಗಳು ಧ್ವನಿ ಪೆಟ್ಟಿಗೆಯನ್ನು ತಲುಪಿದ ಬಳಿಕವೇ ಧ್ವನಿ ಪೆಟ್ಟಿಗೆಯಲ್ಲಿ ಶಬ್ದ ಉತ್ಪಾದನೆ ಆಗುವುದು. ಯಾವ ರೀತಿಯ ಸಂದೇಶ ಮಿದುಳಿನಿಂದ ಬರುತ್ತದೆ ಎಂಬುದರ ಮೇಲೆ ಧ್ವನಿಯ ಏರಿಳಿತ, ಅವಧಿ ನಿರ್ಣಯವಾಗುತ್ತದೆ. ಆದರೆ, ಈ ಮಹಿಳೆಯ ಪ್ರಕರಣದಲ್ಲಿ ಸಮಸ್ಯೆ ಎದುರಾಗಿರುವುದು ಧ್ವನಿ ಪೆಟ್ಟಿಗೆಯಲ್ಲಿ ಮಾತ್ರವೇ ಅಲ್ಲ. ಬದಲಿಗೆ ಧ್ವನಿಯ ಮೂಲದಲ್ಲಿ. ಅಂದರೆ ಮಿದುಳಿನಲ್ಲಿ. ಈ ಮಹಿಳೆಗೆ ಪಾರ್ಶ್ವವಾಯು ಉಂಟಾದಾಗ, ಮಿದುಳಿನಲ್ಲಿ ಉತ್ಪಾದನೆಗೊಂಡ ವಿದ್ಯುತ್‌ ಅಲೆಗಳು ಧ್ವನಿಸಂದೇಶಗಳನ್ನು ಕೊಂಡೊಯ್ಯುವ ನರಮಂಡಳವನ್ನು ಹಾನಿಗೊಳಿಸಿದ್ದವು. ಅಲ್ಲದೇ, ಧ್ವನಿಪೆಟ್ಟಿಗೆಯನ್ನೂ ಘಾಸಿಗೊಳಿಸಿದ್ದವು. ಈ ವೈದ್ಯಕೀಯ ಸಮಸ್ಯೆಯನ್ನು ನಾಲ್ಕು ವರ್ಷಗಳ ಹಿಂದೆ ಕಿವಿ, ಗಂಟಲು ಮತ್ತು ಮೂಗು ಹಾಗೂ ನರರೋಗ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ಜೊತೆಗೆ, ಈ ಸಮಸ್ಯೆಗೆ ಪರಿಹಾರ ಇಲ್ಲವೆಂದೇ ಸ್ಪಷ್ಟವಾಗಿ ಹೇಳಿದ್ದರು. ಈ ರೀತಿ ವೈದ್ಯರಿಂದ ತೀರ್ಮಾನ ಹೊರಬಿದ್ದಾಗ ಎಂತಹ ಗಟ್ಟಿ ಮನಸ್ಸಿನ ವ್ಯಕ್ತಿಯೂ ಖಿನ್ನತೆಗೆ ಒಳಗಾಗುವುದು ಸಹಜ. ಅದೇ, ಹಂತವನ್ನು ಈ ಮಹಿಳೆಯೂ ತಲುಪಿದ್ದರು. ಈ ಮಹಿಳೆಯ ವೈದ್ಯಕೀಯ ಇತಿಹಾಸವನ್ನು ಅಧ್ಯಯನ ಮಾಡಿದ ಎಡ್ವರ್ಡ್‌ ಚಾಂಗ್ ಅವರ ತಂಡವು, ಮಹಿಳೆಗೆ ಧೈರ್ಯ ತುಂಬಿ ತಮ್ಮ ಸಂಶೋಧನೆಯನ್ನು ವಿವರಿಸಿದರು. ಈ ಹೊಸ ಸಂಶೋಧನೆ ಹೀಗಿದೆ: ಮಿದುಳಿನ ಸಂದೇಶಗಳನ್ನು ಗಮನಿಸಿ ಆ ಸಂದೇಶಗಳನ್ನು ಅರ್ಥ ಮಾಡಿಕೊಳ್ಳುವ ಗಣಿತ ಸೂತ್ರವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಒಂದು ಕಾಗದದಷ್ಟು ದಪ್ಪವಿರುವ ಚೌಕಾಕಾರದ ಲೋಹದ ಹಾಳೆಯಲ್ಲಿ ಸಂಜ್ಞಾಗ್ರಾಹಕಗಳನ್ನು ಮುದ್ರಿಸಿದ್ದಾರೆ. ಈ ಹಾಳೆಯನ್ನು ಬಳಿಕ ಮಿದುಳಿನ ಒಳಗೆ ಶಸ್ತ್ರಚಿಕಿತ್ಸೆಯ ಮೂಲಕ ಇರಿಸಿದ್ದಾರೆ. ಜೊತೆಗೆ, ಮಿದುಳಿನ ಸಂಜ್ಞೆಗಳು ಈ ಹಾಳೆಯ ಮೂಲಕ ಹಾದು ಹೋಗುವಂತೆ ನರಗಳನ್ನು ಜೋಡಿಸಿದ್ದಾರೆ. ಬಳಿಕ, ಲೋಹದ ಹಾಳೆಯಿಂದ ಹೊರಡುವ ಅತಿ ಸೂಕ್ಷ್ನ ಕೃತಕ ನರಗಳನ್ನು ಬಾಯಿದ ಸ್ನಾಯುಗಳು ಹಾಗೂ ಧ್ವನಿ ಪೆಟ್ಟಿಗೆಗೆ ಜೋಡಿಸಿದ್ದಾರೆ. ಇದಿಷ್ಟೇ ಶಸ್ತ್ರಚಿಕಿತ್ಸೆಯ ಮೂಲಕ ನಡೆದಿರುವ ಪ್ರಕ್ರಿಯೆ. ಆದರೆ, ಇಲ್ಲಿ ಶಸ್ತ್ರಚಿಕಿತ್ಸೆಯಷ್ಟೇ ಪ್ರಮುಖ ಪಾತ್ರವನ್ನು ಕೃತಕ ಬುದ್ಧಿಮತ್ತೆ ವಹಿಸಿದೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದ ಬಳಿಕ ಮಿದುಳಿನ ಒಳಗಿರುವ ಹಾಳೆಯು ಮಿದುಳಿನ ಎಲ್ಲ ಸಂಜ್ಞೆಗಳನ್ನು ಏಕಕಾಲಕ್ಕೆ ಗುರುತಿಸುವ ಶಕ್ತಿಯನ್ನು ಹೊಂದಿರುವುದಿಲ್ಲ. ಅದು ಕಾಲಾಂತರದಲ್ಲಿ ಕಲಿತುಕೊಳ್ಳುತ್ತದೆ. ಮೊದಲು, 1024 ಪದಗಳ ಗುಚ್ಛವನ್ನು ಗುರುತಿಸುವ ಈ ಸಾಧನವು ಅಷ್ಟು ಪದಗಳ ಸಂಜ್ಞೆಯನ್ನು ಸೃಷ್ಟಿಸಿ, ಬಾಯಿಯ ಸ್ನಾಯುಗಳು ಹಾಗೂ ಧ್ವನಿಪೆಟ್ಟಿಗೆಗೆ ಕಳುಹಿಸಿದೆ. ಆಗ ಧ್ವನಿಯೇ ನಿಂತುಹೋಗಿದ್ದ ಧ್ವನಿಪೆಟ್ಟಿಗೆಯಲ್ಲಿ ಶಬ್ದ ಮೂಡುತ್ತದೆ. ಬಾಯಿಯ ಸ್ನಾಯುಗಳು ಧ್ವನಿಯನ್ನು ಮಾತುಗಳಾಗಿ ಪರಿವರ್ತಿಸಲು ಅತ್ಯವಶ್ಯಕ. ಪಾರ್ಶ್ವವಾಯು ಉಂಟಾಗಿರುವವರಿಗೆ ಬಾಯಿಯ ಸ್ನಾಯುಗಳ ನೈಸರ್ಗಿಕ ಆಕಾರವೇ ವಿರೂಪವಾಗಿ ಬಿಟ್ಟಿರುತ್ತದೆ. ದೋಷವುಳ್ಳ ನರಗಳನ್ನು ಬದಲಿಸಿ, ಕೃತಕ ನರಗಳನ್ನು ಜೋಡಿಸಿದ ಮೇಲೆ ಬಾಯಿಯ ಆಕಾರ ಮೂಲ ಆಕಾರಕ್ಕೆ ಬರುತ್ತದೆ. ಈ ಮಹಿಳೆಯ ಪ್ರಕರಣದಲ್ಲೂ ಇದೇ ರೀತಿಯ ಚಿಕಿತ್ಸೆಯನ್ನು ನೀಡಲಾಗಿದೆ. ಸರಿಸುಮಾರು ನಾಲ್ಕು ತಿಂಗಳುಗಳ ಕಾಲ ಮಿದುಳಿನ ಒಳಗೆ ಇರಿಸಿರುವ ಸಾಧನವು ಮಿದುಳು ಸಂಜ್ಞೆಗಳನ್ನು ಗಮನಿಸಿ ವಿದ್ಯಾರ್ಥಿಯಂತೆ ಕಲಿಯುವ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ. ಈಗ ಸರಿಸುಮಾರು ಶೇ. 30ರಷ್ಟು ಮಾತುಗಳನ್ನು ಆಡುವ ಶಕ್ತಿಯನ್ನು ಈ ಮಹಿಳೆ ವಾಪಸ್ಸು ಪಡೆದಿದ್ದಾರೆ. ಮಾತೇ ನಿಂತು ಹೋಗಿದ್ದ ಮಹಿಳೆಗೆ ಇಷ್ಟು ಪ್ರಮಾಣದಲ್ಲಿ ಮಾತು ಬಂದಿರುವುದು ವರದಾನವೇ ಸರಿ. ಅಲ್ಲದೇ, ಈ ಮಾತುಗಳು ಅಸಹಜವಾಗಿ ಅಥವಾ ಅಸ್ಪಷ್ಟವಾಗಿಲ್ಲ. ಮಾತುಗಳ ಸಂಖ್ಯೆ ಕಡಿಮೆಯಷ್ಟೇ. ಇದರಿಂದಾಗಿ ಸಂವಹನ ಹಾಗೂ ಸಂಪರ್ಕಕ್ಕೆ ಬೇಕಾಗುವಷ್ಟು ಮಾತುಗಳನ್ನು ಈಗಾಗಲೇ ಆಡುವ ಶಕ್ತಿ ಅವರಿಗೆ ಬಂದಿದೆ. ಕಾಲಾಂತರದಲ್ಲಿ ಆಕೆ ಮತ್ತಷ್ಟು ಮಾತನಾಡುವ ಶಕ್ತಿಯನ್ನು ಪಡೆಯುತ್ತಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮುಂದೇನು?: ಈ ಸಂಶೋಧನೆ ಇಲ್ಲಿಗೇ ನಿಲ್ಲುವುದಿಲ್ಲ. ಧ್ವನಿಪೆಟ್ಟಿಗೆಯೇ ನಾಶವಾಗುವ ಪ್ರಕರಣಗಳಲ್ಲೂ ಈ ತಂತ್ರಜ್ಞಾನವನ್ನು ಅಳವಡಿಸುವ ಸಾಧ್ಯತೆ ಇದೆ. ಬದಲಾದ ಧ್ವನಿಯಲ್ಲಿ ಮಾತುಗಳನ್ನು ಹೊರಡಿಸುವ ಅವಕಾಶ ಲಭ್ಯವಾಗುತ್ತದೆ. ಜೊತೆಗೆ, ಕೃತಕವಾಗಿ ಧ್ವನಿಯನ್ನು ಮಧುರಗೊಳಿಸುವ, ಗಡಸುಗೊಳಿಸುವ, ಮೆದುಗೊಳಿಸುವ ಅವಕಾಶಗಳನ್ನೂ ನೀಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಪ್ಲಾಸ್ಟಿಕ್‌ ಸರ್ಜರಿಯ ಮೂಲಕ ಹೇಗೆ ದೇಹದ ರೂಪವನ್ನೇ ಬದಲಿಸಿಕೊಳ್ಳುವ, ಸೌಂದರ್ಯವೃದ್ಧಿಸಿಕೊಳ್ಳುವ ಅವಕಾಶವಿದೆಯೋ, ಹಾಗೆಯೇ, ಧ್ವನಿಯನ್ನೂ ರೂಪಾಂತರ ಮಾಡುವ ಅವಕಾಶಗಳನ್ನು ಭವಿಷ್ಯದಲ್ಲಿ ಎದುರು ನೋಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿರುವ ವಿಜ್ಞಾನಿಗಳು ಮಾತಿನ ಸಂದೇಶಗಳನ್ನು ಮಿದುಳಿನ ಹಂತದಲ್ಲೇ ಇತರೆಡೆಗೆ ಪ್ರಸಾರ ಮಾಡುವ ಸಾಧ್ಯತೆಯೂ ಇದೆ ಎಂದಿದ್ದಾರೆ. ಉದಾಹರಣೆಗೆ, ಗಗನಯಾತ್ರಿಗಳು ಬಾಯಿಯ ಮೂಲಕವೇ ಮಾತನಾಡಬೇಕು ಎಂದೇನಿಲ್ಲ. ಅವರು ಮಿದುಳಿನಲ್ಲಿ ಮಾತನಾಡಿಕೊಳ್ಳುವುದು ಸ್ಪೀಕರ್‌ ಮೂಲಕ ಇತರೆಡೆ ನೇರವಾಗಿ ಪ್ರಸಾರವಾಗುತ್ತದೆ! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.