-3: ಲ್ಯಾಂಡರ್ ಸಾಫ್ಟ್‌ ಲ್ಯಾಂಡಿಂಗ್‌ ಮಾಡಲು ಈ 4 ಹಂತಗಳು ಅತಿಮುಖ್ಯ ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ 'ವಿಕ್ರಮ್' ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ–3ರ ಚಂದ್ರ ಸ್ಪರ್ಶ ಇಂದು ಸಂಜೆ 6.04 ಕ್ಕೆ ಸರಿಯಾಗಿ ಸಮಯ ನಿಗದಿಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಭಾನುವಾರ ಲ್ಯಾಂಡರ್‌ನ ವೇಗ ತಗ್ಗಿಸಿ, ಚಂದ್ರನ ಮೇಲ್ಮೈಗೆ ಅತ್ಯಂತ ಸನಿಹದಲ್ಲಿ ಅಂದರೆ, 25 ಕಿ.ಮೀ ಕಕ್ಷೆಗೆ ತಂದು ನೆಲೆಗೊಳಿಸಲಾಗಿದೆ. ಲ್ಯಾಂಡರ್‌ ಈಗ 25 ಕಿ.ಮೀ 134 ಕಕ್ಷೆಯಲ್ಲಿದೆ. ನೋದನ ಘಟಕದಿಂದ (ಪ್ರೊಪಲ್ಷನ್‌ ಮಾಡ್ಯೂಲ್‌) ಪ್ರತ್ಯೇಕಗೊಂಡ ನಂತರ ಎರಡು ಹಂತಗಳಲ್ಲಿ ಲ್ಯಾಂಡರ್‌ನ ವೇಗ ತಗ್ಗಿಸುವ ಕಾರ್ಯ ನಡೆದಿದೆ. ಈಗ ಆಂತರಿಕ ತಪಾಸಣೆ ಕಾರ್ಯ ನಡೆಯುತ್ತಿದ್ದು, ಇಳಿದಾಣದ (ಲ್ಯಾಂಡಿಂಗ್‌ ಸ್ಥಳ) ಪ್ರದೇಶದಲ್ಲಿ ಸೂರ್ಯೋದಯಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಬುಧವಾರ ಸಂಜೆ 5.45 ಕ್ಕೆ ಸರಿಯಾಗಿ ಕಕ್ಷೆಯಿಂದ ಲ್ಯಾಂಡರ್‌ ಅನ್ನು ಕೆಳಗಿಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಇಸ್ರೊ ತಿಳಿಸಿದೆ. ಲ್ಯಾಂಡರ್‌ (ವಿಕ್ರಮ್‌) ಸಂಜೆ 6.04 ಕ್ಕೆ ಚಂದ್ರ ಸ್ಪರ್ಶ ಮಾಡಲಿದೆ. ಈಗಾಗಲೇ ಚಂದ್ರನಿಗೆ ಅತಿ ಸನಿಹದಲ್ಲಿರುವ ಕಕ್ಷೆಯಲ್ಲಿ ವಿಕ್ರಮ್ 26 ಕೆ.ಜಿ ತೂಗುವ ಆರು ಚಕ್ರಗಳನ್ನು ಹೊಂದಿರುವ ಪ್ರಗ್ಯಾನ್‌ (ರೋವರ್) ಅನ್ನು ಒಡಲಲ್ಲಿ ಇಟ್ಟುಕೊಂಡು ಚಂದ್ರನಿಗೆ ಕೋಳಿ ಮೊಟ್ಟೆ ಆಕಾರದಲ್ಲಿ ಸುತ್ತು ಹಾಕುತ್ತಿದೆ. ಸುಮಾರು 25 ಕಿ.ಮೀ.ಗಳಷ್ಟು ಎತ್ತರದಲ್ಲಿ ಕಾದು ನಿಂತಿದೆ. ವಿಕ್ರಮ್‌ ಮೊದಲಿಗೆ ತನ್ನ ವೇಗವನ್ನು ಇಳಿಸಿಕೊಳ್ಳಬೇಕು. ಈಗ ಗಂಟೆಗೆ ಸುಮಾರು 5,000 ಕಿ.ಮೀನಷ್ಟು ವೇಗದಲ್ಲಿ ಸಾಗುತ್ತಿದೆ. ಆ ವೇಗವನ್ನು ಶೂನ್ಯಕ್ಕೆ ತಂದುಕೊಳ್ಳುವುದು ದೊಡ್ಡ ಸವಾಲು. ಕಕ್ಷೆಯಲ್ಲಿ ವೇಗ ಕಡಿಮೆ ಮಾಡಿಕೊಳ್ಳುತ್ತಿರುವಂತೆಯೇ ಕೆಳಗೆ ಬೀಳಲಾರಂಭಿಸುತ್ತದೆ. ಆಗ ವೇಗ, ದಿಕ್ಕು ತಪ್ಪಲಾರಂಭಿಸುತ್ತದೆ. ಎಲ್ಲವನ್ನೂ ಲೆಕ್ಕಹಾಕಿ ನಿಗದಿಯಾದ ಪ್ರದೇಶದಲ್ಲೇ ಬಂದಿಳಿಯುವಂತೆ ಮಾಡಬೇಕು. ಈ ಸಂದರ್ಭದಲ್ಲಿ ವಿಕ್ರಮ್ ಜೋಲಿ ಹೊಡೆಯುವ ಅಥವಾ ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚು. ಅದನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳಲು ಬೀಳುವಾಗಿನ ವೇಗವನ್ನು ನಿಯಂತ್ರಿಸಿ ಸ್ವಸ್ಥಿತಿಗೆ ಬಂದು ನಿಲ್ಲಲು ರಾಕೆಟ್‌ಗಳನ್ನು ಉರಿಸಲಾಗುತ್ತದೆ. ಲ್ಯಾಂಡರ್‌ ಮತ್ತೆ ಕಕ್ಷೆಯತ್ತ ಸಾಗುತ್ತದೆ ಎಂದು ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಲ್ಯಾಂಡರ್ ಸಾಫ್ಟ್‌ ಲ್ಯಾಂಡಿಂಗ್‌ ಮಾಡಲು ಈ 4 ಹಂತಗಳು ಅತಿಮುಖ್ಯ ಹಂತ 1: ಚಂದ್ರನ ಮೇಲ್ಮೈಯಿಂದ 30 ಕಿ.ಮೀ ಎತ್ತರದಲ್ಲಿರುವ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಸಮತಲ ಸ್ಥಿತಿಯಿಂದ ಲಂಬ ಸ್ಥಿತಿಗೆ ಪರಿವರ್ತಿಸಲು ಕಾರ್ಯ ಆರಂಭವಾಗುತ್ತದೆ. ಪ್ರತಿ ಸೆಕೆಂಡಿಗೆ 1.68 ಕಿಮೀ ವೇಗದಲ್ಲಿ ಸಂಭವಿಸುವ ಈ ಇಳಿಜಾರು ಪ್ರಕ್ರಿಯೆ 690 ಸೆಕೆಂಡು ತೆಗೆದುಕೊಳ್ಳುತ್ತದೆ. ಹಂತ 2: ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ 7.4 ಕಿ.ಮೀ ಎತ್ತರವನ್ನು ಸಮೀಪಿಸುತ್ತಿದ್ದಂತೆ ಅದು ಸಮತಲದಿಂದ ಲಂಬ ಸ್ಥಿತಿಗೆ ಪರಿವರ್ತನೆಗೊಳ್ಳುತ್ತದೆ. ಅದರ ವೇಗವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಈ ಪ್ರಕ್ರಿಯೆ ಸುಮಾರು 10 ಸೆಕೆಂಡು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಹಂತ 3: ಅಂತಿಮ ಮತ್ತು ಅತ್ಯಂತ ಸೂಕ್ಷ್ಮವಾದ ಬ್ರೇಕಿಂಗ್ ಹಂತವು ಲ್ಯಾಂಡರ್ ಸಂಪೂರ್ಣವಾಗಿ ಲಂಬ ಸ್ಥಿತಿಗೆ ಬಂದು ನಿಂತಿರುತ್ತದೆ. ನಿಗದಿಪಡಿಸಿದ ಲ್ಯಾಂಡಿಂಗ್ ಜಾಗಕ್ಕೆ 28.52 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಅಂತಿಮವಾಗಿ ಅದರ ವೇಗವನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಈ ಹಂತವು ಅತ್ಯಂತ ಪರಿಣಾಮಕಾರಿಯಾಗಿದೆ. ಹಂತ 4: ಲ್ಯಾಂಡರ್ ಲ್ಯಾಂಡಿಂಗ್ ಜಾಗವನ್ನು ಸಮೀಪಿಸಿದಾಗ ಅಡೆತಡೆಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಅದು ನಿರ್ಣಾಯಕ ಪರೀಕ್ಷೆಗಳನ್ನು ನಡೆಸುತ್ತದೆ. ಯೋಜಿತ ಲ್ಯಾಂಡಿಂಗ್‌ನೊಂದಿಗೆ ಮುಂದುವರಿಯಬೇಕೆ ಅಥವಾ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆ ಎಂಬುದನ್ನು ನಂತರ ನಿರ್ಧರಿಸುತ್ತದೆ. ‘ಚಂದ್ರನ ದಕ್ಷಿಣ ಧ್ರುವದ ಇಂದು ಮೇಲೆ ಇ ‘ವಿಕ್ರಮ್‌’ ಲ್ಯಾಂಡರ್‌ ಅನ್ನು ಸಾಫ್ಟ್‌ ಲ್ಯಾಂಡಿಂಗ್‌ ಮಾಡಲು ಪ್ರತಿಕೂಲ ವಾತಾವರಣ ಎದುರಾದರೆ ಆಗಸ್ಟ್‌ 27ರಂದು ಮತ್ತೆ ಸುರಕ್ಷಿತವಾಗಿ ಇಳಿಸಲು ಸಿದ್ಧತೆ ನಡೆಸಲಾಗಿದೆ’ ಎಂದು ಇಸ್ರೊದ ಅಹಮದಾಬಾದ್‌ನ ಸ್ಪೇಸ್‌ ಅಪ್ಲಿಯೇಷನ್‌ ಸೆಂಟರ್‌ನ ನಿರ್ದೇಶಕ ನೀಲೇಶ್ ಎಂ. ದೇಸಾಯಿ ಹೇಳಿದ್ದಾರೆ. ಆಗಸ್ಟ್‌ 23ರಂದು ಸಾಫ್ಟ್‌ಲ್ಯಾಂಡಿಂಗ್‌ನ ನಿಗದಿತ ಸಮಯಕ್ಕೂ ಎರಡು ಗಂಟೆಗೂ ಮೊದಲೇ ಚಂದ್ರನ ಮೇಲ್ಮೈನ ಪರಿಸ್ಥಿತಿ, ಲ್ಯಾಂಡರ್‌ನ ಸ್ಥಿತಿ ಆಧರಿಸಿ ಸಾಫ್ಟ್‌ಲ್ಯಾಂಡಿಂಗ್‌ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಇವನ್ನೂ ಓದಿ... 3 : 'ವಿಕ್ರಮ'ನಿಂದ ಚಂದ್ರ ಸ್ಪರ್ಶ ಇಲ್ಲಿ ವೀಕ್ಷಿಸಿ -3 : ಚಂದ್ರಯಾನ ಯಶಸ್ಸಿಗೆ ಎಲ್ಲೆಡೆ ಹಾರೈಕೆ ಚಂದ್ರಯಾನ ಯೋಜನೆಗಳಿಗೆ ತನ್ನದೇ ಕೊಡುಗೆ ನೀಡುತ್ತಿರುವ ತಮಿಳುನಾಡಿನ ಮಣ್ಣು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.