ಆಗಸದಲ್ಲಿ ಲೋಹದ ಕಣಗಳು ಅಕ್ಟೋಬರ್ ಇಪ್ಪತ್ತೊಂದರಂದು ಇಸ್ರೊ ಗಗನಯಾನದ ನೌಕೆಯನ್ನು ಪರೀಕ್ಷಿಸಿತು. ಆಕಾಶಕ್ಕೆ ಹಾರಿದ ಗಗನಯಾನದ ಭಾಗವೊಂದು ಭೂಮಿಗೆ ಸುರಕ್ಷಿತವಾಗಿ ಮರಳುತ್ತದೆಯೇ ಎಂಬ ಪರೀಕ್ಷೆ. ಪರೀಕ್ಷೆ ಯಶಸ್ವಿ ಆಯಿತು ಎನ್ನುವ ಖುಷಿಯ ವಿಚಾರದ ಹಿಂದೆಯೇ ಇಂತಹ ಪರೀಕ್ಷೆಗಳು ವಾಯುಮಂಡಲದಲ್ಲಿ ಲೋಹದ ಬೂದಿಯನ್ನು ಉಳಿಸಿರುತ್ತವೆ ಎನ್ನುವ ಆತಂಕದ ವಿಷಯವನ್ನು ಅಮೆರಿಕೆಯ ಸಾಗರ ಮತ್ತು ವಾಯುವಿಜ್ಞಾನಿಗಳು ವರದಿ ಮಾಡಿದ್ದಾರೆ. ಉಪಗ್ರಹಗಳು, ಗಗನನೌಕೆಗಳು ವಾಯುಮಂಡಲವನ್ನೂ ಮೀರಿದ ಎತ್ತರದಲ್ಲಿ, ಅಂದರೆ ಅಂತರಿಕ್ಷಕ್ಕೆ ಹಾರುತ್ತವೆ. ಇದಕ್ಕೂ ವಾಯುಮಂಡಲಕ್ಕೂ ಸಂಬಂಧವೆಲ್ಲಿಯದು ಎಂದಿರಾ? ಎಲ್ಲ ಉಪಗ್ರಹಗಳೂ ಬಲು ದೂರ ಹಾರುವುದಿಲ್ಲ. ಭೂಮಿಗೆ ಅತಿ ಸಮೀಪ, ಅಂದರೆ ಕೆಲವು ನೂರು ಕಿ.ಮೀ. ಎತ್ತರದಲ್ಲಿ ಸಾವಿರಾರು ಉಪಗ್ರಹಗಳು ಹಾರುತ್ತಿವೆ. ಇವುಗಳಲ್ಲಿ ಕೆಲವು ಬದುಕು ಮುಗಿಸಿ, ಆಗಾಗ್ಗೆ ಭೂಮಿಗೆ ಧುಮುಕುತ್ತವೆ. ಇವು ಹಾಗೂ ಉಪಗ್ರಹಗಳನ್ನು ಹಾರಿಸಿದ ರಾಕೆಟುಗಳು ಮರಳುವಾಗ ಗಾಳಿಯ ಜೊತೆ ಘರ್ಷಣೆಯಿಂದಾಗಿ ಬಿಸಿಯೇರಿ ಸುಟ್ಟು ಹೋಗುತ್ತವೆ. ಆ ಲೋಹದ ಕಣಗಳು ವಾಯುಮಂಡಲದಲ್ಲಿ, ಇಪ್ಪತ್ತರಿಂದ ಎಪ್ಪತ್ತೈದು ಕಿ.ಮೀ. ಎತ್ತರದಲ್ಲಿ ಸಂಗ್ರಹವಾಗುತ್ತಿವೆ ಎಂದು ಅಮೆರಿಕೆಯ ಪರ್ಡೂ ವಿಶ್ವಿದ್ಯಾಲಯದ ಭೂವಿಜ್ಞಾನ, ವಾಯುಮಂಡಲ ಮತ್ತು ವಾಯುಗುಣ ವಿಭಾಗದ ಡೇನಿಯೆಲ್ ಮರ್ಫಿ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ಚಳಿಗಾಲದಲ್ಲಿ ಉತ್ತರ ಹಾಗೂ ದಕ್ಷಿಣ ಧ್ರುವದ ಆಕಾಶದಲ್ಲಿ ಹತ್ತೊಂಬತ್ತು ಕಿ.ಮೀ. ಎತ್ತರದಲ್ಲಿದ್ದ ಗಾಳಿಯನ್ನು ಸಂಗ್ರಹಿಸಿ, ಅದರಲ್ಲಿ ಇರುವ ವಿವಿಧ ಮೂಲವಸ್ತುಗಳ ಪ್ರಮಾಣ ಹಾಗೂ ಪರಿಮಾಣಗಳನ್ನು ಗಮನಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲಿ ಸಾಮಾನ್ಯವಾಗಿ ಕಾಣದ ಅಲ್ಯುಮಿನಿಯಂ, ಲಿಥಿಯಂ ತಾಮ್ರ, ನಿಕಲ್, ಮೊದಲಾದ ಲೋಹಗಳ ಅಂಶಗಳಿದ್ದು ಇವು ರಾಕೆಟ್‌– ಉಪಗ್ರಹಗಳು ಉರಿದು ಹುಟ್ಟಿದ ಮಾಲಿನ್ಯ ಎಂಬುದು ಇವರ ತೀರ್ಮಾನ. ಅದೇನೊ ಸರಿ. ಆದರೆ ಮೂಲ ಇಂಥದ್ದೇ ಎಂದು ಹೇಗೆ ಹೇಳುವುದು? ಆಕಾಶದ ಅಷ್ಟೆತ್ತರದಲ್ಲಿ ಗಾಳಿಯೇ ವಿರಳವಾದರೂ, ಲೋಹಗಳ ಕಣಗಳು ಸಹಜವಾಗಿಯೇ ಇರುತ್ತವೆ. ಬಾಹ್ಯಾಕಾಶದಿಂದ ಭೂಮಿಗೆ ನಿತ್ಯವೂ ಬಂದು ಬೀಳುವ ಉಲ್ಕೆಗಳು ಉರಿದ ಬೂದಿಯ ಅವಶೇಷಗಳು ಅವು ಎನ್ನುವ ನಂಬಿಕೆ ಇದೆ. ಈ ಲೋಹದ ಮೋಡಗಳಿಗೆ ಹೊಸ ಲೋಹ ಸೇರುತ್ತಿವೆಯೇ ಎಂಬ ಪ್ರಶ್ನೆ ಇತ್ತು. ಉಪಗ್ರಹ, ರಾಕೆಟುಗಳಲ್ಲಿ ಬಳಸುವ ಲೋಹಗಳಂತಹ ಲೋಹಗಳು ಸಿಕ್ಕರೆ ಇದಕ್ಕೆ ಉತ್ತರ ಸಿಕ್ಕೀತು ಎನ್ನುವ ಆಶಯದಿಂದ ಈ ವಿಜ್ಞಾನಿಗಳು ಧ್ರುವ ಪ್ರದೇಶದಲ್ಲಿ ಅಧ್ಯಯನವನ್ನು ಕೈಗೊಂಡಿದ್ದರು. ಧ್ರುವ ಪ್ರದೇಶವೇ ಏಕೆಂದರೆ ಇಲ್ಲಿ ಚಳಿ ಇರುವುದರಿಂದ ಭೂಮಿಯ ಬೇರೆಡೆಯಿಂದ ಬಂದ ಗಾಳಿಯೆಲ್ಲವೂ ನೆಲದ ಕಡೆಗೆ ಕುಸಿಯುತ್ತವೆ. ನೆಲದಿಂದ ಮೇಲ್ಗಡೆಗೆ ಗಾಳಿ ಚಲಿಸುವುದಿಲ್ಲ. ಚಳಿಗಾಲದಲ್ಲಿ ಗಾಳಿ ತಣಿದು ಇನ್ನಷ್ಟು ಭಾರವಾಗುವುದರಿಂದ ನೆಲದ ಕಡೆಗಿನ ಕುಸಿತ ಹೆಚ್ಚು. ಆದ್ದರಿಂದ ಇಲ್ಲಿ ಎತ್ತರದ ಆಕಾಶದಲ್ಲಿರುವ ಗಾಳಿಯಲ್ಲಿ ನೆಲದ ಮೇಲಿನ ಮಾಲಿನ್ಯದ ಅಂಶಗಳು ಕಡಿಮೆ ಎಂಬ ತರ್ಕವಿದೆ. ಮರ್ಫಿಯವರ ತಂಡ ಧ್ರುವ ಪ್ರದೇಶದಲ್ಲಿ ಹತ್ತೊಂಬತ್ತು ಕಿ.ಮೀ. ಎತ್ತರದಲ್ಲಿ ಗಾಳಿಯಲ್ಲಿರುವ ದೂಳಿನಂತಹ ಕಣಗಳನ್ನು ಸಂಗ್ರಹಿಸಿ, ‘ಮಾಸ್ ಸ್ಪೆಕ್ಟ್ರೊಮೀಟರ್’ ಬಳಸಿ ವಿಶ್ಲೇಷಿಸಿದೆ. ಈ ತಂತ್ರ ಪ್ರತಿಯೊಂದು ದೂಳಿನ ಕಣವನ್ನೂ ವಿಶ್ಲೇಷಿಸಿ, ಅದರಲ್ಲಿರುವ ವಸ್ತುಗಳನ್ನು ಅವುಗಳ ಪರಮಾಣುವಿಗೆ ತಕ್ಕಂತೆ ವಿಂಗಡಿಸುತ್ತದೆ. ಸಾಮಾನ್ಯವಾಗಿ ವಾಯುಮಂಡಲದ ಈ ಭಾಗದಲ್ಲಿ ಅಲ್ಯುಮಿನಿಯಂ, ಲಿಥಿಯಂ ಮೊದಲಾದ ಲೋಹಗಳು ಕಾಣುವುದಿಲ್ಲ. ಏನಿದ್ದರೂ ಸೋಡಿಯಂ, ಕಬ್ಬಿಣ ಮತ್ತು ನಿಕಲ್‌ನ ಅಂಶಗಳು ಹೆಚ್ಚು. ಅಂತರಿಕ್ಷದಿಂದ ಬರುವ ಉಲ್ಕೆಗಳಲ್ಲಿ ಇರುವ ಈ ಲೋಹಗಳು, ಈ ಎತ್ತರಕ್ಕೆ ಇಳಿಯುವಷ್ಟರಲ್ಲಿ ಗಾಳಿಯಲ್ಲಿರುವ ಆಕ್ಸಿಜನ್‌ನ ಜೊತೆ ಸೇರಿ ಬೇರೆಯೇ ವಸ್ತುವಾಗುತ್ತದೆ. ಹೀಗಾಗಿ ಮರ್ಫಿ ತಂಡ ಸಂಗ್ರಹಿಸಿರುವ ದೂಳಿನಲ್ಲಿರುವುದೆಲ್ಲದರ ಮೂಲ ಬೇರೆ ಎನ್ನಬಹುದು. ಆದರೆ ನಾವೇ ಹಾರಿಸಿದ ನೌಕೆಗಳೇ ಮೂಲ ಎನ್ನುವುದಕ್ಕೆ ಪರೋಕ್ಷ ಪುರಾವೆ ಇದೆ. ಉಪಗ್ರಹಗಳು ಹಾಗೂ ರಾಕೆಟ್ಟುಗಳ ಮೈಗೆ ಅಲ್ಯುಮಿನಿಯಂ ಮಿಶ್ರಲೋಹಗಳ ಹೊದಿಕೆ ಇರುತ್ತದೆ. ಇದರೊಟ್ಟಿಗೆ ಶಾಖರೋಧಕ ಪಿಂಗಾಣಿ ಅಥವಾ ಸೆರಾಮಿಕ್ಕುಗಳಿರುತ್ತವೆ. ಇವುಗಳಲ್ಲಿಯೂ ಅಲ್ಯುಮಿನಿಯಂ ಇರುತ್ತದೆ. ಮರ್ಫಿ ತಂಡ ತಾವು ಸಂಗ್ರಹಿಸಿದ ಏದುಲಕ್ಷ ಕಣಗಳು ಪ್ರತಿಯೊಂದರಲ್ಲಿಯೂ ಇರುವ ವಿವಿಧ ಲೋಹಗಳ ಪರಿಮಾಣವನ್ನು ಅಲ್ಯುಮಿನಿಯಂನದರ ಜೊತೆಗೆ ಹೋಲಿಸಿದ್ದಾರೆ. ಉದಾಹರಣೆಗೆ, ಇಲ್ಲಿರುವ ಲೋಹಾಂಶವೆಲ್ಲವೂ ಉಲ್ಕಾಮೂಲದ್ದೇ ಆದರೆ, ಕಣಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿರಬೇಕು. ಆದರೆ ಹಾಗಿಲ್ಲ; ಕಬ್ಬಿಣದ ಅಂಶವೇ ಹೆಚ್ಚು. ಇದರ ಅರ್ಥ ಆಕಾಶನೌಕೆಗಳಲ್ಲಿ ಬಳಕೆಯಾಗುವ ವಸ್ತುಗಳೇ ಇಲ್ಲಿವೆ. ಏಕೆಂದರೆ ನೌಕೆಗಳಲ್ಲಿ ಸೋಡಿಯಂ ಬಳಕೆ ಇಲ್ಲವೇ ಇಲ್ಲ. ಹೀಗೆ ವಿಜ್ಞಾನಿಗಳು ಪದರಗೋಳ ಅಥವಾ ‘ಸ್ಟ್ರೇಟೊಸ್ಫಿಯರ್’ ಎನ್ನುವ ವಾಯುಮಂಡಲದ ಭಾಗದಲ್ಲಿರುವ ದೂಳಿನಲ್ಲಿ ಆಕಾಶ ನೌಕೆಗಳು ಉರಿದು ಕೂಡಿಸಿದ ಲೋಹದ ಅಂಶವೇ ಹೆಚ್ಚು ಎಂಬ ತೀರ್ಮಾನ ಮರ್ಫಿಯವರದ್ದು. ಅಲ್ಲಿರುವ ದೂಳಿನ ಕಣಗಳಲ್ಲಿ ಶೇ. ಹತ್ತರಷ್ಟು ಈ ಮೂಲದವಂತೆ. ಅಂತರಿಕ್ಷದಲ್ಲಿ ಕೂಡಿಕೊಂಡ ಈ ಲೋಹದ ಪರಿಣಾಮವೇನೊ, ಗೊತ್ತಿಲ್ಲ. ಆದರೆ ಅಂತರಿಕ್ಷ ಕುರಿತ ನಮ್ಮ ಕುತೂಹಲವು ವಾಯುಮಂಡಲದ ಆ ನಿಷ್ಕಳಂಕ ಭಾಗವನ್ನೂ ಮಲಿನಗೊಳಿಸಿದೆ ಎಂಬುದು ವಾಸ್ತವ. ಇನ್ನು ಮುಂದಿನ ವರ್ಷಗಳಲ್ಲಿ ಇನ್ನೂ ಸಾವಿರಾರು ಉಪಗ್ರಹಗಳು, ರಾಕೆಟ್‌ಗಳು ಉಡಾವಣೆಯಾಗಲಿವೆ; ಹಲವು ಉರಿದು ಭೂಮಿಗೆ ಮರಳಲಿವೆ. ಆಗ ಇದರ ನಿಜ ಪರಿಣಾಮ ಗೊತ್ತಾಗಬಹುದು. ಅದಕ್ಕೆ ಕಾಯೋಣವೇ? ಕಾಯಬೇಕೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.