ಸೌರ ಜ್ವಾಲೆ ಶಕ್ತಿಯ ಕ್ಷ–ಕಿರಣ ದಾಖಲಿಸಿದ ಆದಿತ್ಯ ಎಲ್‌–1 ಬೆಂಗಳೂರು: ಆದಿತ್ಯ ಎಲ್‌–1 ನೌಕೆಯ ಎಕ್ಸ್‌ರೇ ಸ್ಪೆಕ್ಟ್ರೊಮೀಟರ್‌ ಮೊದಲ ಬಾರಿಗೆ ಸೂರ್ಯನ ಸೌರಜ್ವಾಲೆಗಳ ಪ್ರಚಂಡ ಶಕ್ತಿಯ ಕ್ಷ–ಕಿರಣವನ್ನು ದಾಖಲಿಸಿದೆ. ಅಕ್ಟೋಬರ್‌ 29 ರಂದು ಮೊದಲ ಬಾರಿಗೆ ಆದಿತ್ಯ ಎಲ್‌–1 ಸೂರ್ಯನನ್ನು ಸುಮಾರು 10 ತಾಸುಗಳ ಕಾಲ ವೀಕ್ಷಿಸಿತು. ಆಗ ಹಠಾತ್‌ ಆಗಿ ಹೊಮ್ಮಿದ ಸೌರಜ್ವಾಲೆಯ ಚಟುವಟಿಕೆಯನ್ನು ನೌಕೆಯಲ್ಲಿನ ಎಕ್ಸ್‌ರೇ ಸ್ಪೆಕ್ಟ್ರೊಮೀಟರ್‌ ದಾಖಲಿಸಿಕೊಂಡಿತು. ಜ್ವಾಲೆಯ ಶಕ್ತಿಯ ಏರಿಳಿತಗಳು ಸ್ಪಷ್ಟವಾಗಿ ದಾಖಲಾಗಿವೆ ಎಂದು ಇಸ್ರೊ ‘ಎಕ್ಸ್‌’ನಲ್ಲಿ ತಿಳಿಸಿದೆ. ಹಠಾತ್‌ ಸೌರ ಜ್ವಾಲೆ ಹೊಮ್ಮಿದ ಸಂದರ್ಭದಲ್ಲಿ ಸ್ಫೋಟಕ ಸ್ವರೂಪದ ಶಕ್ತಿ ಬಿಡುಗಡೆ, ಎಲೆಕ್ಟ್ರಾನ್‌ಗಳ ವೇಗ ವರ್ಧನೆ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧಕರು ಈ ದತ್ತಾಂಶವನ್ನು ಬಳಸಿಕೊಂಡು ಹೆಚ್ಚಿನ ಅಧ್ಯಯನ ನಡೆಸಬಹುದಾಗಿದೆ. ಎಕ್ಸ್‌ರೇ ಸ್ಪೆಕ್ಟ್ರೊಮೀಟರ್‌ ಅನ್ನು ಬೆಂಗಳೂರಿನ ಯು.ಆರ್‌.ರಾವ್‌ ಉಪಗ್ರಹ ಕೇಂದ್ರ ಸ್ಪೇಸ್‌ ಆಸ್ಟ್ರೊನಮಿ ಗ್ರೂಪ್‌ ಅಭಿವೃದ್ಧಿಪಡಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.