ಚಿತ್ರದ ನಾಯಕನಿಲ್ಲಿ ನಿಮ್ಮಿಷ್ಟದಂತೆ ಹೊಡೆಯುತ್ತಾನೆ! ತಂತ್ರಜ್ಞಾನಕ್ಕೆ ತಕ್ಕಂತೆ ಚಿತ್ರರಂಗವೂ ಕಾಲಕಾಲಕ್ಕೆ ಬದಲಾಗುತ್ತದೆ. ರೀಲ್‌ನಿಂದ ಡಿಜಿಟಲ್‌ಗೆ, ಸಾಮಾನ್ಯ ದೃಶ್ಯದಿಂದ 2 ಡಿ, 3 ಡಿ ದೃಶ್ಯಗಳಿಗೆ, ವಿಎಫ್‌ಎಕ್ಸ್‌, ಗ್ರಾಫಿಕ್ಸ್‌ನ ಜಗತ್ತಿಗೆ ಚಿತ್ರರಂಗ ಬದಲಾಗುತ್ತ ಬಂದಿದೆ. ಹೀಗೆಂದು ಈ ಯಾವ ತಂತ್ರಜ್ಞಾನವೂ ತೀರ ಹೊಸತಲ್ಲ. 1980–90ರ ದಶಕಗಳಲ್ಲಿ ಹಾಲಿವುಡ್‌ನಲ್ಲಿ ಪ್ರಯೋಗಗೊಂಡವಂಥವೆ. ಆದರೆ ಬಳಕೆಗೆ ಬಂದಿದ್ದು, ಜನಪ್ರಿಯವಾಗಿದ್ದು ಇತ್ತೀಚೆಗೆ. ‘ಅವತಾರ್‌’ ಸಿನಿಮಾ ಬಂದ ನಂತರ ಚಿತ್ರರಂಗದಲ್ಲಿ 3ಡಿ ತಂತ್ರಜ್ಞಾನ ಬಹಳ ಜನಪ್ರಿಯವಾಯಿತು. ಆದರೆ ಅದಕ್ಕೂ ಮೊದಲೇ 3ಡಿ ತಂತ್ರಜ್ಞಾನ ಬಳಕೆಯಲ್ಲಿತ್ತು. ಅದೇ ರೀತಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಮತ್ತೊಂದು ತಂತ್ರಜ್ಞಾನ ‘ಇಂಟ್ರ್ಯಾಕ್ಟೀವ್‌ ಫಿಲ್ಮ್‌’. 1970ರ ದಶಕದಲ್ಲಿಯೇ ಅಮೆರಿಕದಲ್ಲಿ ಬಳಕೆಗೆ ಬಂದ ಈ ತಂತ್ರಜ್ಞಾನವಿಂದು ಜನಪ್ರಿಯವಾಗುತ್ತಿದೆ. ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕನೊಂದಿಗೆ ಸಂವಾದ ನಡೆಸಿ ಪರದೆ ಮೇಲೆ ಬಿತ್ತರಗೊಳ್ಳುತ್ತಿರುವ ಚಿತ್ರದ ಗತಿ, ಘಟನೆಗಳನ್ನು ಬದಲಿಸುವ ಅವಕಾಶವನ್ನು ಈ ತಂತ್ರಜ್ಞಾನ ನೀಡುತ್ತದೆ. ಉದಾಹರಣೆಗೆ, ಚಿತ್ರವೊಂದರಲ್ಲಿ ತಪ್ಪು ಮಾಡಿದವನನ್ನು ನಾಯಕ ದಂಡಿಸುತ್ತಿರುತ್ತಾನೆ. ಅನೇಕ ಪ್ರೇಕ್ಷಕರು ‘ಇನ್ನೂ ಜೋರಾಗಿ ಹೊಡೆಯಬೇಕಿತ್ತು. ಎರಡೂ ಕಪಾಳಕ್ಕೆ ಬಾರಿಸಬೇಕಿತ್ತು’ ಎಂದೆಲ್ಲ ಕುಳಿತ ಜಾಗದಲ್ಲಿಯೇ ಅಥವಾ ಚಿತ್ರಮಂದಿರದಿಂದ ಹೊರಬಂದ ನಂತರ ಮಾತಾಡುವುದನ್ನು ನಾವೆಲ್ಲ ಕೇಳಿರುತ್ತೇವೆ. ನಾವು ಮಾತಾಡಿದ್ದನ್ನೇ ತೆರೆಯ ಮೇಲೆ ವೀಕ್ಷಿಸುವ ಅವಕಾಶವನ್ನು ಈ ತಂತ್ರಜ್ಞಾನ ನೀಡುತ್ತದೆ. ಹೇಗೆ ಕೆಲಸ ಮಾಡುತ್ತದೆ?: ‘ಇಂಟ್ರ್ಯಾಕ್ಟೀವ್‌ ಫಿಲ್ಮ್‌’ ತಂತ್ರಜ್ಞಾನ ಬಳಸಿಕೊಂಡು ಇತ್ತೀಚೆಗೆ ಸಾಕಷ್ಟು ಸಿನಿಮಾಗಳು ಬರುತ್ತಿವೆ. ನೆಟ್‌ಫ್ಲಿಕ್ಸ್‌ನಲ್ಲಿ ಇದಕ್ಕೊಂದು ಪ್ರತ್ಯೇಕ ವಿಭಾಗವೇ ಇದೆ. ‘ಬ್ಲಾಕ್‌ ಮಿರರ್‌: ಬ್ಯಾಂಡರ್‌ಸ್ನಾಚ್‌’ನಂತಹ ಬೆರೆಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಜನಪ್ರಿಯವಾಗಿವೆ. ಆದಾಗ್ಯೂ ಈ ತಂತ್ರಜ್ಞಾನ ಪ್ರಯೋಗಾತ್ಮಕ ಸಿನಿಮಾಗಳಿಗಷ್ಟೇ ಸೀಮಿತವಾಗಿದ್ದು, ಚಿತ್ರಮಂದಿರಗಳಿಗಿನ್ನೂ ಪೂರ್ತಿಯಾಗಿ ಕಾಲಿಟ್ಟಿಲ್ಲ. ಕನ್ನಡಿಗರಾದ, ನಿಟ್ಟೂರು ಶ್ರೀನಿವಾಸ ರಾಯರ ಕುಟುಂಬದ ಅರ್ಜುನ್‌ ನಿಟ್ಟೂರು ಈ ತಂತ್ರಜ್ಞಾನಕ್ಕೊಂದು ‘ಇಂಟ್ರಾಫ್ಲಿಕ್ಸ್‌’ ಎಂಬ ಪ್ರತ್ಯೇಕ ಆ್ಯಪ್‌ ರೂಪಿಸಿ ಜನಪ್ರಿಯ ತಾರೆಯರ ಸಿನಿಮಾಗಳನ್ನು ಈ ತಂತ್ರಜ್ಞಾನದಡಿ ತರುವ ಯತ್ನದಲ್ಲಿದ್ದಾರೆ. ‘ಉದಾಹರಣೆಗೆ, ನೀವು ಕೆಜಿಎಫ್‌ ಚಿತ್ರ ನೋಡುತ್ತಿರುವಿರಿ ಎಂದುಕೊಳ್ಳಿ. ಅಲ್ಲಿ ನಾಯಕ ಯಶ್‌ ಖಳನಾಯಕನಿಗೆ ಹೊಡೆಯುತ್ತಾರೆ. ಯಾವ ವೇಗದಲ್ಲಿ ಹೊಡೆಯಬೇಕು ಎಂಬುದನ್ನು ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕ ನಿರ್ಧರಿಸಬಹುದು. ಅದಕ್ಕಾಗಿ ‘ಇಂಟ್ರಾಫ್ಲಿಕ್ಸ್‌’ ಎಂಬ ಆ್ಯಪ್‌ ಸಿದ್ಧಗೊಳ್ಳುತ್ತಿದೆ. ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕ ಈ ಆ್ಯಪ್‌ ಓಪನ್‌ ಮಾಡಿ ಯಾವ ವೇಗದಲ್ಲಿ ಹೊಡೆಯಬೇಕು ಎಂಬುದಕ್ಕೆ ನಾವು ನೀಡಿದ ಆಯ್ಕೆಗಳಲ್ಲಿ ಒಂದಕ್ಕೆ ಮತ ಹಾಕಬಹುದು. ಹೆಚ್ಚು ಮತ ಗಳಿಸಿದ ಆಯ್ಕೆಯ ದೃಶ್ಯ ಚಿತ್ರಮಂದಿರದಲ್ಲಿ ಪ್ರಸಾರಗೊಳ್ಳುತ್ತದೆ. ಇದೇ ರೀತಿ ಯಾವುದೋ ಒಂದು ಮಹತ್ವದ ತೀರ್ಮಾನ ತೆಗೆದುಕೊಳ್ಳಬೇಕಿದ್ದರೆ, ಆಗಲೂ ಪ್ರೇಕ್ಷಕರಿಗೆ ನಾಯಕ ಯಾವ ತೀರ್ಮಾನ ತೆಗೆದುಕೊಳ್ಳಬೇಕೆಂದು ಆಯ್ಕೆ ಮಾಡುವ ಅವಕಾಶ ನೀಡುತ್ತೇವೆ. ಅದೇ ತೀರ್ಮಾನ ನಾಯಕನ ಬಾಯಿಯಿಂದ ಪರದೆ ಮೇಲೆ ಹೊರಬರುತ್ತದೆ’ ಎನ್ನುತ್ತಾರೆ, ಅರ್ಜುನ್‌. ಸದ್ಯ ಪ್ರಚಲಿತವಿರುವುದು ದೃಶ್ಯ ಆಧಾರಿತ ಸಂವಾದ ತಂತ್ರಜ್ಞಾನ. ಅಂದರೆ ಪ್ರೇಕ್ಷಕನ ಆಯ್ಕೆಗೆ ಅನುಗುಣವಾಗಿ ದೃಶ್ಯಗಳನ್ನು ಬದಲಿಸುವುದು. ‘ಇಂಟ್ರಾಫ್ಲಿಕ್ಸ್‌’ ಇಂಟೆನ್ಸಿಟಿ ಆಧಾರಿತ, ಧ್ವನಿ ಆಧಾರಿತ, ವೈಯಕ್ತಿಕ ಆಯ್ಕೆ ಆಧಾರಿತ ವೈಶಿಷ್ಠ್ಯಗಳನ್ನು ಈ ತಂತ್ರಜ್ಞಾನದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಕಳೆದ 4–5 ವರ್ಷದಿಂದ ಕೆಲಸ ಮಾಡುತ್ತಿದೆ. ಸಿನಿಮಾವನ್ನು ಪ್ರೇಕ್ಷಕರು ಮನೋರಂಜನೆಗೆಂದು ನೋಡುತ್ತಾರೆ. ಆದಾಗ್ಯೂ ಯಾವ ನಿರ್ದೇಶಕನು ಚಿತ್ರದ ಕಥೆಯಲ್ಲಿ, ಭಾವನೆಗಳಲ್ಲಿ ಪ್ರೇಕ್ಷಕನಿಗೆ ಆಯ್ಕೆ ನೀಡಲು ಇಷ್ಟಪಡುವುದಿಲ್ಲ. ಇದೊಂದು ಕಲೆ ಮತ್ತು ನಿರ್ದೇಶಕನಿಗೆ ಒಂದು ಆಲೋಚನೆ ಇರುತ್ತದೆ. ಪ್ರೇಕ್ಷಕ ಕೂಡ ಆಲೋಚನೆಗೆ ಹಚ್ಚುವ ಬದಲಾವಣೆಗಳನ್ನು ಬಯಸುವುದಿಲ್ಲ. ಯೂಟ್ಯೂಬ್‌ ನೋಡುವ ಇಂದಿನ ಮಕ್ಕಳು ಪಾತ್ರಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಇದು ಕಥೆಯ ಮೇಲೋ, ಪಾತ್ರದ ಮೇಲೋ ಪ್ರಭಾವ ಬೀರುವ ರೀತಿಯಲ್ಲ. ಉದಾಹರಣೆಗೆ, ನಾಯಕ ಹೊಟೆಲ್‌ಗೆ ಹೋದರೆ ಚಹಾ ಕುಡಿಯಬೇಕೋ, ಕಾಫಿ ಕುಡಿಯಬೇಕೋ, ವೆಜ್‌ ತಿನ್ನುತ್ತಾನೋ, ನಾನ್‌ ವೆಜ್‌ ತಿನ್ನುತ್ತಾನೋ...ಈ ರೀತಿಯ ಮನರಂಜನೆ ಹೊಂದಿದ ಆಯ್ಕೆ ನೀಡುತ್ತ ಪ್ರೇಕ್ಷಕ ಸಿನಿಮಾದೊಂದಿಗೆ ಬೆರೆಯುವಂತೆ ಮಾಡುವುದು ಈ ತಂತ್ರಜ್ಞಾನದ ಉದ್ದೇಶ. ಎಲ್ಲ ಸಿನಿಮಾಗಳಲ್ಲಿಯೂ ಸಾಧ್ಯವಾ? ‌ನಾವು ಬಯಸಿದ್ದು ತೆರೆಯ ಮೇಲೆ ಬರುವಾಗ, ಯಾವುದೋ ದೊಡ್ಡ ನಾಯಕ ಚಿತ್ರಮಂದಿರದಲ್ಲಿ ನಮ್ಮ ಹೆಸರು ಹೇಳಿ ಕರೆಯುವಾಗ ನಮಗೆ ಖುಷಿಯಾಗುವುದು ಸಹಜ. ಶಿವರಾಜ್‌ ಕುಮಾರ್‌ ಸಿನಿಮಾವೊಂದು 700 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಎಂದಿಟ್ಟುಕೊಳ್ಳಿ. ಶಿವಣ್ಣ ಹೊಟೆಲ್‌ಗೆ ಹೋಗಿ ತಿಂಡಿ ತಿನ್ನುವ ದೃಶ್ಯವಿದೆ. ಒಂದು ಹೊಟೆಲ್‌ನಲ್ಲಿ ಈ ಚಿತ್ರಮಂದಿರದಲ್ಲಿ ಕುಳಿತ ‘ಎಕ್ಸ್‌’ ವ್ಯಕ್ತಿಗೆ ಇಡ್ಲಿ ಇಷ್ಟ ಎಂದು ಇಡ್ಲಿಯನ್ನು ಆರ್ಡರ್‌ ಮಾಡುತ್ತಾರೆ. ಮತ್ತೊಂದು ಚಿತ್ರಮಂದಿರದಲ್ಲಿ ಅದೇ ದೃಶ್ಯದಲ್ಲಿ ಆ ಚಿತ್ರಮಂದಿರದಲ್ಲಿಯೇ ಸಿನಿಮಾ ವೀಕ್ಷಿಸುತ್ತಿರುವ ‘ವೈ’ ವ್ಯಕ್ತಿಗೆ ಚಪಾತಿ ಇಷ್ಟವೆಂದು ಚಪಾತಿಯನ್ನು ಆರ್ಡರ್‌ ಮಾಡುತ್ತಾರೆ. ಅಷ್ಟರ ಮಟ್ಟಿಗೆ ವಿಶೇಷತೆಯನ್ನು ಈ ತಂತ್ರಜ್ಞಾನ ಹೊಂದಿದೆ. ಹೀಗೆಂದು ಪರದೆಯ ಮೇಲೆ ತಂತ್ರಜ್ಞಾನದಿಂದ ಜಾದೂ ನಡೆಯುವುದಿಲ್ಲ. ಬದಲಿಗೆ ನಾಯಕ ಖಳನಾಯಕನಿಗೆ ಹೊಡೆಯುವ ದೃಶ್ಯಗಳನ್ನು ಬೇರೆ ಬೇರೆ ವೇಗದಲ್ಲಿ ಚಿತ್ರೀಕರಿಸಿ, ನಂತರ ಅದರ ಆಧಾರದಲ್ಲಿ ಪ್ರೇಕ್ಷಕನಿಗೆ ಆಯ್ಕೆ ಕೊಡುತ್ತಾರೆ. ಇಡೀ ಸಿನಿಮಾವನ್ನು ಪ್ರೇಕ್ಷಕ ತನಗೆ ಬೇಕಾದಂತೆ ಬದಲಿಸಲು ಸಾಧ್ಯವಿಲ್ಲ. ಒಂದು ಚಿತ್ರದಲ್ಲಿ ಈ ರೀತಿ ಆರೆಂಟು ಆಯ್ಕೆಗಳು ಇರುತ್ತವೆ. ಹೀಗಾಗಿ ಇಂಟ್ರಾಕ್ಟೀವ್‌ ಸಿನಿಮಾ ತೆರೆ ಮೇಲೆ ತರಲು ನಿರ್ಧರಿಸಿದರೆ ಚಿತ್ರಕಥೆಯ ಹಂತದಿಂದಲೇ ಇದರ ಸಿದ್ಧತೆಗಳು ನಡೆಯಬೇಕು. ‘ಶಿವಣ್ಣನ ಧ್ವನಿಯ ಉದಾಹರಣೆಯನ್ನೇ ತೆಗೆದುಕೊಂಡರೆ, ಶಿವರಾಜ್‌ ಕುಮಾರ್‌ ಧ್ವನಿ ಸ್ಯಾಂಪಲ್‌ ಅನ್ನು ‘ಎಐ’ಗೆ ನೀಡಿ ಶಿವಣ್ಣ ಧ್ವನಿಯಲ್ಲಿ 700 ಚಿತ್ರಮಂದಿರಕ್ಕೂ 700 ಪ್ರತ್ಯೇಕ ಸಂಭಾಷಣೆ ಸಿದ್ಧಮಾಡಬೇಕು. ಹೀಗಾಗಿ ಈ ತಂತ್ರಜ್ಞಾನ ಕೆಲವಷ್ಟೇ ಆಯ್ಕೆಗಳಿಗೆ ಸೀಮಿತವಾಗಿದೆ. ಆದರೆ ನಮ್ಮ ವಿರೆಜಾ ರೆವಲ್ಯೂಷನ್‌ ಕಂಪನಿ ಈ ತಂತ್ರಜ್ಞಾನವನ್ನು ದೊಡ್ಡ ನಾಯಕರ ಕಮರ್ಷಿಯಲ್‌ ಸಿನಿಮಾಗಳಿಗೂ ತರುವ ಪ್ರಯತ್ನ ಮತ್ತು ಅದಕ್ಕೆ ಸಂಬಂಧಿತ ಸಂಶೋಧನೆಯಲ್ಲಿ ಕೆಲಸ ಮಾಡುತ್ತಿದೆ. ಹಲವು ಕಂಪನಿಗಳ ಜೊತೆ ಕೈಜೋಡಿಸಿ ಕೆಲ ಪ್ರಾಯೋಗಿಕ ಯೋಜನೆಗಳು ಆಗಿವೆ. ಈಗಿನ ಮಕ್ಕಳು ಮುಂದಿನ ಸಿನಿಮಾ ಪ್ರೇಕ್ಷಕರು. ಹೀಗಾಗಿ ಅವರು ಈ ರೀತಿ ಫ್ಯಾಂಟಸಿಯನ್ನು ಇಷ್ಟಪಡುತ್ತಾರೆ. ಸ್ಟಾರ್‌ಗಳ ಸಿನಿಮಾದಲ್ಲಿ ಈ ತಂತ್ರಜ್ಞಾನ ಅಳವಡಿಕೆಯಾದಾಗ ಮತ್ತಷ್ಟು ಜನಪ್ರಿಯವಾಗುತ್ತದೆ. ಈಗಿನ ಟ್ರೆಂಡ್‌ನಲ್ಲಿ ಈ ತಂತ್ರಜ್ಞಾನಕ್ಕೆ ಭವಿಷ್ಯವೂ ಉತ್ತಮವಾಗಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ, ಅರ್ಜುನ್‌. ಚಿತ್ರಮಂದಿರದಲ್ಲಿಯೇ ಬದಲಾಗುತ್ತದೆಯಾ? ಒಂದು ಸಿನಿಮಾ ಪೂರ್ತಿಯಾಗಿ ಸಿದ್ಧಗೊಂಡು ಸಿನಿಮಾ ಮಂದಿರದಲ್ಲಿ ಪ್ರಸಾರಗೊಳ್ಳಲು ಹೋದ ನಂತರ ಚಿತ್ರದ ಧ್ವನಿ ದೃಶ್ಯಗಳ ಬದಲಾವಣೆ ಸಾಧ್ಯವಿಲ್ಲ. ಪ್ರಸ್ತುತ ಕನ್ನಡ ಸಿನಿಮಾಗಳು ಯುಎಫ್‌ಒ ಕ್ಯೂಬ್‌ ಮೊದಲಾದ ಸಂಸ್ಥೆಗಳ ಸರ್ವರ್‌ ಮೂಲಕ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಬಿತ್ತರಗೊಳ್ಳುತ್ತದೆ. ಹಾಗಿದ್ದಲ್ಲಿ ಪ್ರತಿ ಚಿತ್ರಮಂದಿರದಲ್ಲಿ ಒಂದೇ ಸಿನಿಮಾ ಬೇರೆ ಬೇರೆ ರೀತಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ. ‘ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಿಸುವಾಗ 10 ಸೆಕೆಂಡ್‌ ಹಿಂದೆ ಅಥವಾ ಮುಂದೆ ಹೋಗಲು ಅವಕಾಶವಿರುವ ತಂತ್ರಜ್ಞಾನದ ರೀತಿಯಲ್ಲಿಯೇ ಇಂಟ್ರ್ಯಾಕ್ಟೀವ್‌ ಫಿಲಂ ಕೂಡ ಕೆಲಸ ಮಾಡುತ್ತದೆ. ಚಿತ್ರಮಂದಿರಲ್ಲಿ ಲೈವ್‌ ಆಗಿ ದೃಶ್ಯಗಳು ಅಥವಾ ಧ್ವನಿಗಳನ್ನು ಬದಲಿಸುವ ತಂತ್ರಜ್ಞಾನ ಕೂಡ ಭವಿಷ್ಯದಲ್ಲಿ ಬರಲಿದೆ’ ಎನ್ನುತ್ತಾರೆ ಅರ್ಜುನ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.